ವಿಟ್ಲ

ಒಡಿಯೂರು: ಶ್ರೀಮದ್ರಾಮಾಯಣ ಮಹಾಯಜ್ಞ- ಶ್ರೀ ಹನುಮೋತ್ಸವ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಶ್ರೀರಾಮ ಲೋಕ ಶಿಕ್ಷಣಕ್ಕೆ ನಿದರ್ಶನವಾದರೆ, ಶ್ರೀಕೃಷ್ಣ ಲೋಕೋತ್ತರ ಶಿಕ್ಷಣವನ್ನು ಬೋಧಿಸಿದ ಗುರುವೆನಿಸಿದ್ದಾರೆ. ರಾಮಾಯಣವನ್ನು ಅಧ್ಯಯನ ಮಾಡಿದರೆ ಭಾರತ ದರ್ಶನವಾಗುವುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ- ಶ್ರೀ ಹನುಮೋತ್ಸವ ಧಾರ್ಮಿಕ ಕಾರ್‍ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ರಾಜಧರ್ಮ, ರಾಷ್ಟ್ರ ಧರ್ಮ ಸೂತ್ರವನ್ನು ಜಗತ್ತಿಗೆ ತಿಳಿಸಿದ ಶ್ರೀರಾಮನ ಸೇವಕರಾದಾಗ ರಾಷ್ಟ್ರಸೇವೆ ಮಾಡಿದಂತಾಗುವುದು. ಸಾತ್ವಿಕ, ರಾಜಸ, ತಾಮಸ ಎಂಬ ತ್ರಿವಿಧಗಳಲ್ಲಿ ಯಜ್ಞ, ದಾನ, ತಪಸ್ಸು ಕೂಡಿದ್ದು, ಸಾತ್ವಿಕ ಗುಣವುಳ್ಳ ಪ್ರತಿಯೊಂದು ಕಾರ್ಯಗಳು ಸನ್ಮಂಗಳವನ್ನುಂಟು ಮಾಡುವುದು. ಅಯೋಧ್ಯೆಯಲ್ಲಿ ಶ್ರೀ ರಾಮಾ ಮಂದಿರ ನಿರ್‍ಮಾಣ ಪ್ರತಿಯೊಬ್ಬ ರಾಮ ಭಕ್ತರ ಅಪೇಕ್ಷೆಯಾಗಿದ್ದು, ಅತೀ ಶೀಘ್ರವಾಗಿ ಈ ಕಾರ್‍ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕನ್ಯಾನ ಬಾಳೆಕೋಡಿ ಶ್ರೀಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಮತ್ತು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀಮದ್ರಾಮಯಣ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಅನ್ನ ಸಂತರ್ಪಣೆ ನಡೆಯಿತು. ಕಾರ್ಕಳ ಅನಂತಶಯನ ಬಂಟ ಮಹಿಳಾ ಯಕ್ಷಗಾನ ಕಲಾಮಂಡಳಿಯಿಂದ ಮಾಯಕೊದ ಬಿನ್ನೆದಿ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.

ಮುಂಬೈ ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು, ಮುಂಬೈ ಶ್ರೀಗುರುದೇವ ಸೇವಾ ಬಳಗದ ಅಧ್ಯಕ್ಷ ಕೃಷ್ಣ ಎಲ್. ಶೆಟ್ಟಿ, ಪುಣೆ ಶ್ರೀಗುರುದೇವ ಸೇವಾ ಬಳಗದ ಪ್ರಧಾನ ಕಾರ್‍ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಸಮಿತಿ ಸಂಚಾಲಕ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಸಹ ಸಂಚಾಲಕರಾದ ದಿನೇಶ್ ಶೆಟ್ಟಿ ಪಟ್ಲಗುತ್ತು, ಶೀನಪ್ಪ ಮಂಗಳಪದವು ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಒಡಿಯೂರು ತುಳುಕೂಟದ ಸಂತೋಷ್ ಭಂಡಾರಿ ವಂದಿಸಿದರು.

ಭಗವನ್ನಾಮ ಸಂಕೀರ್ತನೆ:

ಹನುಮೋತ್ಸವದ ಅಂಗವಾಗಿ ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಒಡಿಯೂರು ಶ್ರೀ ಸಂಸ್ಥಾನಕ್ಕೆ ನಡೆದ ಭಗವನ್ನಾಮ ಸಂಕೀರ್ತನೆ ಪಾದಯಾತ್ರೆಗೆ ವಿಟ್ಲದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಚಾಲನೆ ನೀಡಿದರು.

ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಆರಂಭವಾಯಿತು. ಕನ್ಯಾನದಲ್ಲಿ ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ವಿಟ್ಲದಲ್ಲಿ ಶ್ರೀ ಉಳ್ಳಾಳ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ತ್, ವಿಟ್ಲ ಪರಿಸರದ ಎಲ್ಲಾ ಸಂಘ ಸಂಸ್ಥೆಗಳು, ಕಾಶಿಮಠದಲ್ಲಿ ಕಾಶಿ ಯುವಕ ಮಂಡಲ ಹಾಗೂ ಯುವತಿ ಮಂಡಲ, ಉಕ್ಕುಡದಲ್ಲಿ ಶ್ರೀ ದುರ್ಗಾಯುವಕ ಮಂಡಲ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಆನೆಪದವಿನಲ್ಲಿ ಶ್ರೀ ಮಹಮ್ಮಾಯಿ ಭಜನಾ ಮಂದಿರ, ಬೈರಿಕಟ್ಟೆ ಶ್ರೀ ಅಶ್ವತ್ಥನಾರಾಯಣ ಭಜನಾ ಮಂದಿರ, ಜೆಡ್ಡು ಶ್ರೀ ಧನ್ವಂತರಿ ಸೇವಾಟ್ರಸ್ಟ್ ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಸ್ವಾಗತಿಸಿದರು.

ಕನ್ಯಾನದಲ್ಲಿ ಭಾರತ ಸೇವಾಶ್ರಮ, ಶ್ರೀ ರಾಘವೇಂದ್ರ ಭಜನಾ ಮಂಡಳಿ, ಬಂಡಿತ್ತಡ್ಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕುಟ್ಟುತ್ತಡ್ಕ, ಒಡಿಯೂರಿನಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಒಡಿಯೂರು ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿದ್ಯಾಪೀಠದವರು ಯಾತ್ರೆಯನ್ನು ಸ್ವಾಗತಿಸಿದರು. ವಿವಿಧ ಭಜನಾ ಮಂಡಳಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.