ಶೈಖ್ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ “ಮಿತ್ತಬೈಲು ಉರೂಸ್–ನೇರ್ಚೆ“ಯು ಏ.5ರಿಂದ ೧೫ರವರೆಗೆ ಬಿ.ಸಿ.ರೋಡ್–ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಹಬೀಬುಲ್ಲಾ ಹೇಳಿದ್ದಾರೆ.
ಶನಿವಾರ ಸಂಜೆ ಬಿ.ಸಿ.ರೋಡಿನ ಪ್ರಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ. 5ರಂದು ರಾತ್ರಿ 9ಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಅವರು ದುವಾಃ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಪ್ರತೀದಿನ ರಾತ್ರಿ 9.30 ರಿಂದ ಪ್ರಸಿದ್ಧ ಧಾರ್ಮಿಕ ವಿದ್ವಾಂಸರಿಂದ ಧಾರ್ಮಿಕ ಮತಪ್ರಭಾಷಣ ನಡೆಯಲಿದೆ. ಎ.15 ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಅಸ್ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಭಾಗವಹಿಸುವರು. ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ತನ್ವೀರ್ ಸೇಠ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಬ್ದುಲ್ ಗಫೂರ್, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್, ಬಿ.ಕೆ.ಹರಿಪ್ರಸಾದ್, ಮಾಜಿ ಮೇಯರ್ ಅಶ್ರಫ್, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು ಮತ್ತಿತರರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಸಲಾಂ, ಮುಹಮ್ಮದ್ ಅದ್ಯಾಡಿ, ಮುಹಮ್ಮದ್ ಅಲಿ, ಇಬ್ರಾಹಿಂ, ಅಶ್ರಫ್, ಸಲೀಂ, ಶಾಹುಲ್ ಹಮೀದ್, ಅಬೂಬಕರ್ ಮಠ ಮತ್ತಿತರರು ಉಪಸ್ಥಿತರಿದ್ದರು.