ಕಲ್ಲಡ್ಕ

ಸಾಂಸ್ಕೃತಿಕ, ಸನಾತನ ಬದುಕಿನ ಪ್ರತೀಕ ಶ್ರದ್ಧಾಕೇಂದ್ರ: ಸುಬ್ರಹ್ಮಣ್ಯ ಸ್ವಾಮೀಜಿ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಸುಭದ್ರ, ಸನಾತನ, ಸಾಂಸ್ಕೃತಿಕ ಬದುಕಿನ ಪ್ರತೀಕವಾಗಿ ಶ್ರದ್ಧಾಕೇಂದ್ರಗಳು ಮೂಡಿಬಂದಿವೆ ಎಂದು ಸುಬ್ರಹ್ಮಣ್ಯ ಮಠಾಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮೊಗರನಾಡು ಸಾವಿರ ಸೀಮೆಯ ನಿಟಿಲಾಕ್ಷ ಸದಾಶಿವ ದೇವರ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮಗಳ ಅಂಗವಾಗಿ ನಿಟಿಲಾಪುರದಲ್ಲಿ ಸೋಮವಾರ ರಾತ್ರಿ ನಡೆದ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ರುದ್ರದೇವರಿಂದ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ರ್ವಸುತ್ತದೆ ಎಂದ ಅವರು, ಹಿಂದಿನ ವೈಭವವನ್ನು ದೇವಸ್ಥಾನಗಳು ನೆನಪಿಸುತ್ತವೆ ಎಂದರು.

ನಾಗರಪಂಚಮಿ ರಜೆ:
ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗಾದರೂ ನಾಗರಪಂಚಮಿಯನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.

ಈ ಕುರಿತು ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಬಳಿಯೂ ಪ್ರಸ್ತಾಪಿಸಲಾಗಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಕೋಟ್ಯಾನ್, ಜಿಲ್ಲೆಯಲ್ಲಿ ನಾಗನ ಆರಾಧನೆಗೆ ಹೆಚ್ಚಿನ ಮಹತ್ವ ಇರುವ ಕಾರಣ ಈ ಮನವಿ ಮಾಡಲಾಗಿದೆ ಎಂದರು.

ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅಳವಡಿಸುವ ಅಗತ್ಯವನ್ನು ಒತ್ತಿ ಹೇಳಿದ ಕೋಟ್ಯಾನ್, ದೇವಸ್ಥಾನಗಳಿಗೆ ಬರುವಾಗ ಅದಕ್ಕೊಪ್ಪುವ ವಸ್ತ್ರಗಳನ್ನು ಧರಿಸಬೇಕು, ದೇವರಲ್ಲಿ ಭಕ್ತಿಯಿಂದ ಅರಿಕೆ ಮಾಡಿಕೊಳ್ಳಲು ಬರುವ ಸಂದರ್ಭ ಮನಸ್ಸು ಪ್ರಫುಲ್ಲವಾಗಿಡಲು ಇದು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ಸುಬ್ರಹ್ಮಣ್ಯದ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಧಾರ್ಮಿಕ ಕ್ಷೇತ್ರಗಳಿಗೆ ಅನ್ನದಾನ, ಯಕ್ಷಗಾನ ಕ್ಷೇತ್ರಕ್ಕೆ ಪ್ರೋತ್ಸಾಹವನ್ನು ಸುಬ್ರಹ್ಮಣ್ಯ ಕ್ಷೇತ್ರದಿಂದ ನೀಡಲಾಗುತ್ತದೆ ಎಂದರು. ವಾರಕ್ಕೆ ಒಂದು ಬಾರಿಯಾದರೂ ಹಿಂದು ಬಾಂಧವರು ದೇವಸ್ಥಾನಕ್ಕೆ ಹೋಗುವ ಸಂಪ್ರದಾಯ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಆಶೀರ್ವಚನ ನೀಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದೇವರ ಮೇಲೆ ನಂಬಿಕೆಯೇ ಪ್ರಧಾನವಾಗಿರುತ್ತದೆ. ದೇವರಲ್ಲಿ ಭಾವುಕವಾಗಿ ನಾವು ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದರು.

ಒಳ್ಳೆಯ ಕೆಲಸ ಮಾಡಿದವರನ್ನು ಬೆನ್ನು ತಟ್ಟಲು ಹಿಂಜರಿಕೆ ಬೇಡ ಎಂದು ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದರು. ಅಪಪ್ರಚಾರಕ್ಕೆ ಕಿವಿಗೊಡದೆ ತಾಳ್ಮೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಮತ್ತು ವ್ಯವಸ್ಥಾಪನಾ ಸಮಿತಿಯ ಎಲ್ಲ ತಂಡಗಳನ್ನು ಶ್ಲಾಘಿಸಿದ ಅವರು, ಅಭೂತಪೂರ್ವ ಕಾರ್ಯಗಳನ್ನು ಈ ಸಮಿತಿಗಳು ನಡೆಸಿವೆ ಎಂದರು. ದೇವಸ್ಥಾನದ ವಿಚಾರದಲ್ಲಿ ಸಂಕುಚಿತ ಮನೋಭಾವ ಹೊಂದುವುದು ಸಲ್ಲದು ಎಂದ ಅವರು, ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ತು, ಮಕರಜ್ಯೋತಿ ಚಿಟ್ ಫಂಡ್ ಪ್ರೈ ಲಿಮಿಟೆಡ್ ಮಂಗಳೂರು ಎಂ.ಡಿ. ಸುರೇಶ್ ರೈ, ಶ್ರೀ ದುರ್ಗಾ ಫೆಸಿಲಿಟೀಸ್ ಮಾಲೀಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ತಾಲೂಕು ಮರಾಠಿ ಸೇವಾ ಸಂಘದ ಸಂಚಾಲಕ ವಿಶ್ವನಾಥ ನಾಯ್ಕ ಕೋಮಾಲಿ, ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಜಿಬಿ ಗ್ರೂಪ್ಸ್ ನ ಗಣೇಶ್ ಬಂಗೇರ, ವಕೀಲ ಪುಳಿಂಚ ಶ್ರೀಧರ ಶೆಟ್ಟಿ, ಯಮುನಾ ಬಿಲ್ಡರ್‍ಸ್ ಪಾಲುದಾರ ಪುರುಷೋತ್ತಮ ಶೆಟ್ಟಿ, ಬೋಳಂತೂರು ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ರೈ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಸ್ವಾಗತಿಸಿದರು. ಮಹೇಶ್ ಗಟ್ಟಿ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು, ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು ಉಪಸ್ಥಿತರಿದ್ದರು.

ನಿಟಿಲಾಕ್ಷ ಸನ್ನಿಯಲ್ಲಿ ಬುಧವಾರದ ಕಾರ್ಯಕ್ರಮ
ಬುಧವಾರ ಬೆಳಗ್ಗೆ ಗಣಪತಿಹೋಮ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಶಾಂತಿಹೋಮ, ತತ್ವಹೋಮ, ತತ್ವಕಲಶಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವುದು. ಸಂಜೆ ೬ರಿಂದ ಕುಂಭೇಶ ಕರ್ಕರಿ ಕಲಶ ಪೂಜೆ, ಅವಾಸ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾವಾಸ ನಡೆಯಲಿದೆ. ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಸಚಿವ ಬಿ.ರಮಾನಾಥ ರೈ ವಹಿಸುವರು. ಧಾರ್ಮಿಕ ದತ್ತಿ ಸಚಿವ ರುದ್ರಪ್ಪ ಲಮಾಣಿ, ಹಿರಿಯ ಸಾಹಿತತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಶಾಮ ಭಟ್ ಸಹಿತ ಪ್ರಮುಖ ಗಣ್ಯರು ಭಾಗವಹಿಸಲಿರುವರು ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts