www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಚಿತ್ರಗಳು: ವರುಣ್ ಕಲ್ಲಡ್ಕ
ಮಾ.21ರಿಂದ ಆರಂಭಗೊಂಡು 30ರವರೆಗೆ ನಾನಾ ಕಾರ್ಯಕ್ರಮಗಳೊಂದಿಗೆ ಬಂಟ್ವಾಳ ತಾಲೂಕಿನ ಮೊಗರನಾಡು ಸಾವಿರ ಸೀಮೆ ಶ್ರೀ ಕ್ಷೇತ್ರ ನಿಟಿಲಾಪುರದ ನಿಟಿಲಾಕ್ಷ ಸದಾಶಿವ ದೇವಸ್ಥಾನದ ನವೀಕರಣಗೊಂಡ ಪ್ರಾಸಾದದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಶ್ರೀ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ನಡೆದವು.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ರಾವ್ ಕಾರಂತ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್, ಪ್ರಧಾನ ಅರ್ಚಕ ನಾರಾಯಣ ರಾವ್ ಕಾರಂತ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಕಾರ್ಯದರ್ಶಿ ಡಾ.ವಸಂತ ಎನ್. ನಿಟಿಲಾಪುರ ಸಹಿತ ಉತ್ಸವ ಸಮಿತಿ ಪ್ರಮುಖರು, ಸೀಮೆಯ ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ನಡೆದು, ಬಳಿಕ ಬೆಳಗ್ಗೆ 6.30ಕ್ಕೆ ಮೀನ ಲಗ್ನದಲ್ಲಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಪ್ರತಿಷ್ಠೆ, ಅಷ್ಟಬಂಧ ಲೇಪನ, ನಿದ್ರಾಕಲಶಾಬಿಷೇಕ, ಜೀವಕಲಶಾಭಿಷೇಕ, ಪ್ರಾಣಾನ್ಯಾಸ, ಅಷ್ಟಕಾನ್ಯಾಸ, ಮಂತ್ರನ್ಯಾಸ, ಧ್ವಜ ಪ್ರತಿಷ್ಟೆ, ಪ್ರತಿಷ್ಠಾ ಬಲಿ ನಡೆದವು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.