ಬಂಟ್ವಾಳ

ಕಾಂಗ್ರೆಸ್ ತೊರೆದ ತಾಪಂ ಸದಸ್ಯ ಬಿಜೆಪಿಗೆ ಸೇರ್ಪಡೆ

ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ನಡೆದ ಬಿಜೆಪಿಯ ಮತಗಟ್ಟೆ ಪ್ರಮುಖರ ಸಭೆಯಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡ ತಾಪಂ ಸದಸ್ಯ ಪ್ರಭಾಕರ ಪ್ರಭು ಮತ್ತಿತರರು ಬಿಜೆಪಿ ಸೇರ್ಪಡೆಯಾದರು.

ಪ್ರಭಾಕರ ಪ್ರಭು ಅವರೊಂದಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ನಾಯಕ, ಗ್ರಾಪಂ ಸದಸ್ಯರಾಗಿದ್ದ ಜಿನರಾಜ ಕೋಟ್ಯಾನ್, ಲಕ್ಷ್ಮೀನಾರಾಯಣ ಭಟ್, ವಸಂತ ದರ್ಖಾಸು, ನಾಗೇಶ್ ಅಮೀನ್, ಸದಾನಂದ ನಾಟಿ, ರಾಜೇಶ್ ನಾಟಿ, ನಾಗೇಶ್ ಏಳಬೆ, ಉಮೇಶ್ ಟೈಲರ್ ಮೊಗರ್ನಾಡು, ನಾಗೇಶ್ ಪೂಜಾರಿ, ರಾಮಚಂದ್ರ ಪೂಜಾರಿ, ದಾಮೋದರ ಕುಲಾಲ್, ಉಮಾನಾಥ ಮೊಗರ್ನಾಡು, ವಸಂತ ಅಂತರ, ನಾಗೇಶ್ ಬೋಳಂತೂರು ಮತ್ತು ರಮಾನಂದ ನಾಯಿಲ ಸೇರ್ಪಡೆಗೊಂಡರು.

ಈ ಸಂದರ್ಭ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಕ್ಷೇತ್ರ ಗೆಲ್ಲಬೇಕು ಎಂಬುದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಿಂತನೆಯೂ ಆಗಿದೆ. ಈ ಕಾರಣದಿಂದಾಗಿಯೇ ಮುಂಬಯಿಯಿಂದ ಗೋಪಾಲ ಶೆಟ್ಟಿ ಅವರು ಕ್ಷೇತ್ರಕ್ಕೆ ಬಂದಿದ್ದಾರೆ. ಯಡಿಯೂರಪ್ಪ, ಅಮಿತ್ ಶಾ ಅವರೂ ಇಲ್ಲೇ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಿದ್ದು, ರಾಜ್ಯದ ಹಲವೆಡೆ ಗೆಲ್ಲುವಂತೆ ಬಂಟ್ವಾಳ ಕ್ಷೇತ್ರದಲ್ಲೂ ಬಿಜೆಪಿ ವಿಜಯಪತಾಕೆ ಹಾರಿಸಲಿದೆ ಎಂದರು.

ಕಾಂಗ್ರೆಸ್ ಗೆ ಸೋಲಿನ ಭೀತಿ ಎದುರಾಗಿದೆ. ಈ ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ನಾವು ಸಿದ್ಧ ಎಂಬ ಪತ್ರವನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದ ನಳಿನ್, ಬಂಟ್ವಾಳ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ಸರಿಯಾಗಿ ಜನಾರ್ದನ ಪೂಜಾರಿಯವರನ್ನು ಮಾತನಾಡಲು ಬಿಟ್ಟರೆ ಸಿದ್ದರಾಮಯ್ಯ ಅವರು ಕುರಿತ ಸತ್ಯಗಳು ಹೊರಬೀಳುತ್ತವೆ. ಈಗಾಗಲೇ ಶ್ರೀನಿವಾಸ ಪ್ರಸಾದ್, ಎಸ್.ಎಂ.ಕೃಷ್ಣರಂಥ ನಾಯಕರನ್ನೇ ಕಾಂಗ್ರೆಸ್ ಮೂಲೆಗುಂಪು ಮಾಡಿದೆ. ಸಿದ್ದರಾಮಯ್ಯನವರೇ ನೀವು ಕೇವಲ ಧರ್ಮವನ್ನು ಒಡೆದದ್ದಲ್ಲ, ಜೆಡಿಎಸ್ ಕಾಂಗ್ರೆಸ್ ಮತ್ತು ಮೂಲ ಕಾಂಗ್ರೆಸ್ ಎಂದು ಕಾಂಗ್ರೆಸ್ ಅನ್ನೇ ಒಡೆದಿದ್ದೀರಿ ಎಂದು ನಳಿನ್ ಹೇಳಿದರು. ಕಾಂಗ್ರೆಸ್ ಓಡಿಸಲು ಜನ ತೀರ್ಮಾನಿಸಿದ್ದಾರೆ. ದ.ಕ. ಜಿಲ್ಲೆಯ ಯಾವುದೇ ಮೂಲೆಗೆ ಹೋಗಲಿ, ಬಂಟ್ವಾಳದಲ್ಲಿ ರಮಾನಾಥ ರೈ ಅವರನ್ನು ಸೋಲಿಸಬೇಕು ಎಂದು ಹೇಳುತ್ತಿದ್ದಾರೆ. ತುಷ್ಟೀಕರಣ, ರಬ್ಬಾಳಿಕೆ ರಾಜಕಾರಣ ನೀಡುತ್ತಿರುವುದು ಇದಕ್ಕೆ ಕಾರಣ, ಹೀಗಾಗಿ ಬಂಟ್ವಾಳದಲ್ಲಿ ಒಂದಲ್ಲ ಹತ್ತಾರು ಬಾಗಿ ಗೆಲುವು ಸಾಧಿಸುವ ಅಗತ್ಯವಿದೆ ಎಂದು ನಳಿನ್ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಾತನಾಡಿ, ಪಾರ್ಟಿ ಕಾರ್ಯಕರ್ತರು ಬಂದು ಭಾಷಣ ಕೇಳಿ ಹೋಗುತ್ತಿಲ್ಲ. ಸಂಘಟನೆಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಬಂಟ್ವಾಳ ಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಮೋನಪ್ಪ ಭಂಡಾರಿ, ಜಿ.ಆನಂದ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಮಾನಾಥ ಕೋಟ್ಯಾನ್, ಚಂದ್ರಶೇಖರ ಉಚ್ಚಿಲ್, ಹರಿಕೃಷ್ಣ ಬಂಟ್ವಾಳ್, ಸುಗುಣ ಕಿಣಿ, ಮೋನಪ್ಪ ದೇವಸ್ಯ, ರಾಮದಾಸ ಬಂಟ್ವಾಳ ಉಪಸ್ಥಿತರಿದ್ದರು. ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ