ಶನಿವಾರ ಬೆಳಗ್ಗೆ ನಂದಾವರ ದೇವಸ್ಥಾನದ ಪಕ್ಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಸಜೀಪಮುನ್ನೂರು ಗ್ರಾಮದ ರೈತ ಮುಖಂಡ, ಬಳಕೆದಾರರ ಹೋರಾಟಗಾರ ಶರತ್ ಕುಮಾರ್ (45) ಮೃತಪಟ್ಟಿದ್ದಾರೆ. ಕಾಲು ಜಾರಿ ಬಿದ್ದು, ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಪತ್ನಿ, ಪುತ್ರನನ್ನು ಅವರು ಅಗಲಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿದ್ದ ಶರತ್, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ, ಎತ್ತಿನಹೊಳೆ ಹೋರಾಟ, ಸ್ಥಳೀಯವಾಗಿ ಯುವಕ ಸಂಘಗಳಲ್ಲಿ ಮುಂಚೂಣಿಯಲ್ಲಿದ್ದರು.ರೈತರಾಗಿದ್ದ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಆರ್.ಟಿ.ಐ. ಕಾರ್ಯಕರ್ತರಾಗಿಯೂ ಜನರೊಂದಿಗೆ ಬೆರೆಯುತ್ತಿದ್ದರು. ರೈತ ಸಂವಾದ ಏರ್ಪಡಿಸುವುದು, ವಿದ್ಯುತ್ ಬಳಕೆದಾರರ ಚಳವಳಿ ಸಕ್ರಿಯವಾಗುವ ಮೂಲಕ ಸರಕಾರದ ಗಮನಕ್ಕೆ ಜನರ ಸಮಸ್ಯೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಅವರ ಅಕಾಲಮೃತ್ಯುವಿಗೆ ರೈತಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದು, ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಶರತ್ ಮನೆಯಿಂದ ಸಜೀಪಮುನ್ನೂರು ಗ್ರಾಮದಲ್ಲಿರುವ ತನ್ನ ಮನೆಯಿಂದ ನಂದಾವರ ದೇವಸ್ಥಾನದ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದು, ಬಳಿಕ ದೇವಸ್ಥಾನಕ್ಕೆ ತೆರಳಿ ಮರಳುವ ವಾಡಿಕೆ ಇಟ್ಟುಕೊಂಡಿದ್ದರು. ಅದೇ ರೀತಿ ಶನಿವಾರವೂ ಬೆಳಗ್ಗೆ ಸುಮಾರು 6.30ರ ವೇಳೆ ಮನೆಯಿಂದ ತೆರಳಿದ್ದ ಅವರು ಬಾರದೇ ಇರುವುದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಬೈಕ್ ಮತ್ತು ಚಪ್ಪಲಿಗಳು ನದಿ ತೀರದಲ್ಲಿ ಕಂಡುಬಂದಿದೆ. ಮುಳುಗುತಜ್ಞರನ್ನು ಸಂಪರ್ಕಿಸಿ, ದೇಹ ಮೇಲಕ್ಕೆತ್ತಿದ್ದು, ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಶರತ್ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಕಾಲುಜಾರಿ ಬಂಡೆಯ ಮೇಲೆ ಬಿದ್ದ ಕಾರಣ ತಲೆಗೆ ಏಟು ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸರು 174 ಸಿಆರ್ ಪಿಸಿಯಡಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಸಂತಾಪ: ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿಯಲ್ಲಿ ಸಕ್ರಿಯರಾಗಿದ್ದ ಶರತ್ ಸಾವಿಗೆ ಸಹ ಹೋರಾಟಗಾರರಾದ ಎನ್.ಕೆ.ಇದಿನಬ್ಬ, ಸುದೇಶ್ ಮಯ್ಯ, ಸುಬ್ರಹ್ಮಣ್ಯ ಭಟ್ ಹಾಗೂ ರೈತ ಮುಖಂಡರಾದ ಮನೋಹರ ಶೆಟ್ಟಿ, ಶ್ರೀಧರ ಶೆಟ್ಟಿ ಬೈಲಗುತ್ತು ಮೊದಲಾದವರು ಸಂತಾಪ ಸೂಚಿಸಿದ್ದಾರೆ.