www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನೌಕರರು ಬೀಳ್ಕೊಟ್ಟರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಗ್ಡೆ, ಪ್ರತಿಯೊಬ್ಬ ವ್ಯಕ್ತಿಯ ಜನನದಿಂದ ಮರಣದ ತನಕವೂ ಕಂದಾಯ ಇಲಾಖೆ ಅಗತ್ಯ ಸೇವೆ ಸಲ್ಲಿಸುತ್ತಿದ್ದು, ಕಂದಾಯ ಇಲಾಖಾ ಕೆಲಸ, ದೇವರ ಕೆಲಸದಷ್ಟು ಪುಣ್ಯದ ಕೆಲಸ ಎಲ್ಲಾ ಇಲಾಖೆಗೂ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖಾ ಸಿಬ್ಬಂದಿಗಳು, ಸರಕಾರದ ಧ್ಯೇಯೋದ್ದೇಶ ಹಾಗೂ ಜನರ ಹಿತದೃಷ್ಟಿಯನ್ನು ಕಾಯ್ದುಕೊಳ್ಳುವ ಕಾರ್ಯ ಸರ್ವ ಸನ್ನದ್ದರಾಗಬೇಕೆಂದು ಸಲಹೆ ನೀಡಿದರು.
ಸರಕಾರಿ ಸೇವಾವಧಿಯಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ವರ್ಗಾವಣೆ, ನಿವೃತ್ತಿ ಸಹಜವಾದ ಪ್ರಕ್ರಿಯೆಯಾಗಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಸೇವಾ ಧರ್ಮಕ್ಕೆ ನಿಷ್ಠೆ ತೋರಿಸಬೇಕೆಂದು ತಿಳಿಸಿದರು.
ಬಂಟ್ವಾನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ತಹಶೀಲ್ದಾರ್ ಪುರಂದರ ಹೆಗ್ಡೆ ಅವರು, ಜನಸ್ನೇಹಿಯಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿ, ಆಡಳಿತಾತ್ಮಕ ಸಮಸ್ಯೆ ಪರಿಹರಿಸುತ್ತಿದ್ದರು ಎಂದು ತಿಳಿಸಿದರು.
ತಾಲೂಕು ಆಡಳಿತ, ಚುನಾವಣಾ, ಆಹಾರ, ಭೂ ಸುಧಾರಣೆ, ನಾಡ ಕಚೇರಿ, ಅಕ್ರಮ- ಸಕ್ರಮ, ಜನನ- ಮರಣ, ಜನ ಸ್ನೇಹಿ ಕೇಂದ್ರ, ಆಧಾರ್ ಕೇಂದ್ರ, ಶಾಖಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸಿಬ್ಬಂದಿಗಳು ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಉಪತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ಗ್ರೆಟ್ಟಾ ಮಸ್ಕರೇಂಜಸ್, ರಾಜೇಶ್ ನಾಯ್ಕ್, ಸೀತಾರಾಮ ಉಪಸ್ಥಿತರಿದ್ದರು.
ಹಿರಿಯ ಗ್ರಾಮ ಲೆಕ್ಕಾಧಿಕಾರಿ ಎ.ಪಿ.ಭಟ್, ಸಾಮಾಜಿಕ ಮುಖಂಡ ಅಬೂಬಕ್ಕರ್ ಅಮ್ಮುಂಜೆ, ಪತ್ರಕರ್ತ ಫಾರೂಕ್ ಬಂಟ್ವಾಳ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮ ಲೆಕ್ಕಾಧಿಕಾರಿ ನವ್ಯಾ ಪ್ರಾರ್ಥಿಸಿ, ಭೂ ಮಾಪನ ಶಾಖಾ ಮೇಲ್ವಿಚಾರಕ ನಿಸಾರ್ ಅಹ್ಮದ್ ಸ್ವಾಗತಿಸಿ, ಗ್ರಾಮಲೆಕ್ಕಾಧಿಕಾರಿ ತೌಫೀಕ್ ವಂದಿಸಿದರು.
ಹೊಸ ತಹಶೀಲ್ದಾರ್ ನಿಯುಕ್ತಿ:
ಪುರಂದರ ಹೆಗ್ಡೆ ಅವರು ವರ್ಗಾವಣೆಯ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ಜೀನ್ ಮೇರಿ ತೌರೋ ಅವರನ್ನು ಪ್ರಭಾರ ನೆಲೆಯಲ್ಲಿ ನಿಯುಕ್ತಿಗೊಳಿಸಲಾಗಿದೆ.