ತಾಲೂಕಿನ ಮಿನಿವಿಧಾನ ಸೌಧ (ತಾಲೂಕು ಕಚೇರಿ)ದಲ್ಲಿ ಅವ್ಯವಸ್ಥೆಗಳು ಇವೆ ಎಂದು ಆರೋಪಿಸಿ ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ಮಾತನಾಡಿ, ತಾಲೂಕಿನ ಕಚೇರಿಯೊಳಗೆ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿ ಯಾರು ಸರಕಾರಿ ನೌಕರರ, ಸಿಬ್ಬಂದಿ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಬ್ರೋಕರ್‌ಗಳೇ ರಾಜಾರೋಷವಾಗಿ ಕಚೇರಿಯೊಳಗೆ ನುಗ್ಗಿ ತಮಗೆ ಬೇಕಾದಂತಹ ಸಾರ್ವಜನಿಕರ ಕಡತಗಳನ್ನು ವಿವೇವಾರಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ ಮಾತನಾಡಿ, ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬೇಕಾದ ಆಧಾರ್‌ಕಾರ್ಡ್, ಆರ್‌ಟಿಇ ಅರ್ಜಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಗಿದೆ. ಅಲ್ಲದೆ ಕಚೇರಿ ಆವರಣದಲ್ಲಿ ಮದ್ಯವರ್ತಿಗಳು ಹೆಚ್ಚಾಗಿದೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಸಾರ್ವಜನಿಕರಿಗೆ ಅಗತ್ಯ ಕೆಲಸಗಳು ಅನಗತ್ಯ ವಿಳಂಬವಾಗುತ್ತಿದೆ. ಸಾರ್ವಜನಿಕರು ಮಿನಿ ವಿಧಾನಸೌದದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರೂ, ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್, ಪುರಸಭಾ ಸದಸ್ಯ ಮುನೀಶ್ ಅಲಿ, ಸುಲೈಮಾನ್ ಉಸ್ತಾದ್, ಇಸ್ಮಾಯಿಲ್ ಬಾವ ಮತ್ತಿತರರು ಹಾಜರಿದ್ದರು. ಅಕ್ಬರ್ ಅಲಿ ನಿರೂಪಿಸಿದರು.ಇದೇ ಸಂದರ್ಭದಲ್ಲಿ ನಾಸಿರ್ ಹಾಗೂ ತಂಡದಿಂದ ತಾಲೂಕು ಕಚೇರಿಯ ಅವ್ಯವಸ್ಥೆಯ ಅಣಕಿಸುವ ಮೂಕಾಭಿನಯ ಪ್ರದರ್ಶನಗೊಂಡಿತು.