ಬಂಟ್ವಾಳ ತಾಲೂಕಿನ ಕಡ್ತಾಲಬೆಟ್ಟು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಗುರುವಾರ ’ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ’ಎಂಬ ಜಾಗೃತಿ ಕಾರ್ಯಗಾರ ನಡೆಯಿತು.
ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳನ್ನು ಉಳಿಸಿ, ಬೆಳೆಸಬೇಕಾಗಿದೆ. ಇದರಿಂದ ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯ ಒದಗುತ್ತದೆ ಎಂದು ನಿತ್ಯಾನಂದ ಶೆಟ್ಟಿ ಹೇಳಿದರು.
ನೀರಿನ ಮೂಲಗಳಿಲ್ಲದ ಕಡೆಗಳಲ್ಲಿ ಬೇಸಿಗೆಗಾಲದಲ್ಲಿ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಒದಗಿಸಿದಾಗ ಪಕ್ಷಿಗಳಿಗೆ ಉಪಯೋಗವಾಗುತ್ತದೆ. ಹೀಗಾಗಿ ಮನೆ, ಶಾಲೆ ಕಟ್ಟಡ ಆವರಣಗಳಲ್ಲಿ ನೀರಿನ ತಟ್ಟೆ ಅಳವಡಿಸಿ ಈ ಮೂಲಕ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದರು.
ಈ ಸಂದರ್ಭ ರಮ್ಯ ಮಾತನಾಡಿ, ಪರಿಸರದಲ್ಲಿ ವೈವಿಧ್ಯಮಯ ಸಸ್ಯ ವರ್ಗಗಳಿವೆ. ಸಮೃದ್ಧವಾದ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎಂ. ರತ್ನಾಕರ ಭಟ್ , ಕೃಷಿಕ ಯಂ. ಕೇಶವಯ್ಯ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿನಿ ನಿಧಿ ಶೆಟ್ಟಿ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು.