ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ, ವಿಟ್ಲದ ಪೊನೋಟ್ಟುವಿನ ತಾನಾಜಿ ಎಂಬವರ ಮನೆಯಲ್ಲಿನ ಫ್ರಿಜ್ ಸಹಿತ ವಿದ್ಯುತ್ ಉಪಕರಣಗಳು ಭಸ್ಮಗೊಂಡಿವೆ. ವಯರಿಂಗ್ ಸುಟ್ಟುಹೋಗಿವೆ. ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಹಲವು ವಸ್ತುಗಳು ಕರಕಲಾಗಿವೆ.
ಬುಧವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಸಂಚಾರ ವ್ಯತ್ಯಯಗೊಂಡಿತ್ತು. ಗುರುವಾರ ಬೆಳಿಗ್ಗೆ ವಿದ್ಯುತ್ ಸಂಪರ್ಕ ಬರುತ್ತಿದ್ದಂತೆ ತಾನಾಜಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ರಿಜ್‌ನ ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿದೆ. ಬಳಿಕ ಮನೆಯ ಅಡುಗೆ ಕೋಣೆಯೊಳಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಫ್ರಿಜ್ ಭಸ್ಮಗೊಂಡಿತು. ಮನೆಯ ಛಾವಣಿ ಬಿರುಕು ಬಿಟ್ಟಿದಲ್ಲದೇ ಗೋಡೆ ಬಿರುಕುಬಿಟ್ಟಿದೆ. ಮನೆಯ ವೈಯರಿಂಗ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹಲವು ವಿದ್ಯುತ್ ಉಪಕರಣ ಸೇರಿದಂತೆ ಬೆಲೆಬಾಳುವ ವಸ್ತುಗಳು ನಾಶಗೊಂಡವು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ. ಮನೆಯೊಳಗಡೆ ಇರಿಸಿದ್ದ ಎರಡು ಅನಿಲ ಸಿಲಿಂಡರ್ ಹೊರಗಡೆ ಎಸೆಯುವ ಮೂಲಕ ಸಂಭವಿಸಲಿದ್ದ ದೊಡ್ಡ ಅನಾಹುತವನ್ನು ತಪ್ಪಿಸಲಾಯಿತು. ಬಳಿಕ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಸಂಭವಿಸಿದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಉಪವಿಭಾಗದ ಎಂಜಿನಿಯರ್ ಪ್ರವೀಣ್ ಜೋಷಿ, ಶಾಖಾಧಿಕಾರಿ ವಸಂತ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಮೊದಲಾದವರು ಬೇಟಿ ನೀಡಿ ಪರಿಶೀಲಿಸಿದ್ದಾರೆ.