ಜಿಲ್ಲಾ ಸುದ್ದಿ

ಇಂದಿರಾ ಕ್ಯಾಂಟೀನ್ – ಗುಣಮಟ್ಟ, ಶುಚಿತ್ವದಲ್ಲಿ ರಾಜಿ ಇಲ್ಲ: ಯು.ಟಿ.ಖಾದರ್

www.bantwalnews.com

ಇಂದಿರಾ ಕ್ಯಾಂಟೀನ್ ಊಟ, ತಿಂಡಿ ಗುಣಮಟ್ಟ, ಪ್ರಮಾಣ, ಶುಚಿತ್ವದ ವಿಚಾರದಲ್ಲಿ ರಾಜಿ ಇಲ್ಲ. ಗ್ರಾಹಕರಿಗೇನಾದರೂ ಆಹಾರದ ಪ್ರಮಾಣದ ಬಗ್ಗೆ ಅನುಮಾನ ಇದ್ದಲ್ಲಿ ಎಲೆಕ್ಟ್ರಿಕಲ್ ಸ್ಕೇಲ್ ಅನ್ನು ಕೌಂಟರ್ ನಲ್ಲಿ ಅಳವಡಿಸಿ.

ಹೀಗೆ ಗುರುವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್.

ಖಾದರ್ ನೀಡಿದ ಸೂಚನೆಗಳು ಇವು.

  • ಆಹಾರದ ರುಚಿಯಲ್ಲಿ ವ್ಯತ್ಯಾಸವಾಗಬಾರದು.
  • ಸರಿಯಾದ ರೂಪದಲ್ಲಿ ಸರಿಯಾದ ಗುಣಮಟ್ಟದಲ್ಲಿ ಆಹಾರವನ್ನು ಒದಗಿಸಬೇಕು.
  • ಇಂದಿರಾ ಕ್ಯಾಂಟೀನ್‍ನ ಫಲಾನುಭವಿಗಳಲ್ಲಿ ಹೆಚ್ಚಿನವರು  ಕಾರ್ಮಿಕ ವರ್ಗದ ಜನರು, ಬೆಳಿಗ್ಗೆ ಉಪಹಾರ ಮಾಡಿದ ನಂತರ ಮಧ್ಯಾಹ್ನದ ವರೆಗೆ ಹೊಟ್ಟೆ ತುಂಬಿದಂತಿರಬೇಕು.
  • ಗ್ರಾಹಕರ ಬೇಡಿಕೆಯ ಮೇರೆಗೆ ಚಿತ್ರಾಹ್ನದ ಜೊತೆ ಚಟ್ನಿ ಅಥವಾ ರೈತಾ ಮಾಡವಂತೆ ಹಾಗೂ ಪೊಂಗಲನ್ನು  ಉಪಹಾರದ ಪಟ್ಟಿಯಿಂದ  ಕೈ ಬಿಡಿ.
  • ಊಟದಲ್ಲಿ ಮೊಸರನ್ನದ ಬದಲು ಪಲ್ಯವನ್ನು ನೀಡಿ. ಅಂಗವಿಕಲ ವ್ಯಕ್ತಿಗಳ ಅನುಕೂಲಕ್ಕಾಗಿ ಕೂಪನ್ ಮೀಸಲಿಡಿ. ಅಂಗವಿಕಲರಿಗೆ, ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ಪ್ರಥಮ ಆದ್ಯತೆ ಮೇಲೆ ಕೂಪನ್ನು ಹಂಚಬೇಕು.
  • ಕೂಪನ್‍ನಲ್ಲಿ ಉಪಹಾರದ ನಿಗದಿತ ಬೆಲೆ (ರೂ. 12) ಮತ್ತು ಗ್ರಾಹಕರು  ನೀಡುವಂತಹ ಬೆಲೆ (ರೂ. 5) ಎರಡನ್ನು ನಮೂದಿಸ ತಕ್ಕದು.
  • ಸರ್ಕಾರ ಭರಿಸುತಿರುವ ವೆಚ್ಚದ ಬಗ್ಗೆ ಗ್ರಾಹಕರಿಗೆ ಸ್ಪಷ್ಟತೆ ಇರಬೇಕು. ಇಂದಿರಾ ಕ್ಯಾಂಟೀನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಇಂದಿರಾ ಕ್ಯಾಂಟೀನ್‍ನ ಸಮವಸ್ತ್ರ  ಮತ್ತು ಟೋಪಿಯನ್ನು  ಹಾಕಿಕೊಂಡು ಕಾರ್ಯನಿರ್ವಹಿಸಬೇಕು.
  • ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವೈದೈಕೀಯ ಪರೀಕ್ಷೆ ನಡೆಸಬೇಕು ಮತ್ತು ದೈಹಿಕ ಸದೃಢತೆಯುಳ್ಳ ವ್ಯಕ್ತಿಯನ್ನು  ಹುದ್ದೆಗೆ ನೇಮಿಸಿಕೊಳ್ಳಬೇಕು.

ಉಳ್ಳಾಲ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‍ನ ನಿರ್ಮಾಣದ ಕೆಲಸವು ಮುಂದಿನ ವಾರ ಸಂಪೂರ್ಣಗೊಳ್ಳಲಿದೆ. ಇದು ಮಾರ್ಚ್ 21 ಕ್ಕೆ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಹೋಬಳಿ ಮಟ್ಟದಲ್ಲಿ ರಾಜ್ಯದಲ್ಲೇ ಪ್ರಥಮ ಇಂದಿರಾ ಕ್ಯಾಂಟೀನ್ ಉಳ್ಳಾಲದಲ್ಲಿ ಆರಂಭವಾಗುತ್ತದೆ ಎಂದರು ಖಾದರ್.

ದ.ಕ. ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಮಾತನಾಡಿ ಕೆಲವು ಸೂಚನೆ ನೀಡಿದರು. ಅವು ಹೀಗಿವೆ.

  • ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
  • ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಕೂಡಲೇ ಮಹಾನಗರ ಪಾಲಿಕೆಗೆ ತಿಳಿಸಬೇಕು.
  • ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾದಲ್ಲಿ ಕೂಡಲೇ ಇಲಾಖೆಗೆ ತಿಳಿಸಬೇಕು ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು . ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಬೇಕು, ಜೂನ್ ತಿಂಗಳಿನಲ್ಲಿ ಮಳೆ ಜಾಸ್ತಿ ಇರುವುದರಿಂದ  ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.
  • ಉಪಹಾರ ಮತ್ತು ಊಟದಲ್ಲಿ ತರುವಂತಹ ಅಂತಿಮ ಬದಲಾವಣೆಯನ್ನು  ತಮ್ಮ ಗಮನಕ್ಕೆ ತರಬೇಕು.

ಸಭೆಯಲ್ಲಿ ಸಾಯಿ ಹಾಸ್ಪಿಟಲಿಟಿ ಸರ್ವಿಸ್‍ನ ಮ್ಯಾನೇಜರ್ ಚಂದ್ರಹಾಸ್ , ಕೆಫ್ ಇನ್‍ಫ್ರಾ, ಕಂಟ್ರಾಕ್ಟರ್  ರೋನಾಲ್ಡ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ