www.bantwalnews.com Editor: Harish Mambady
ಬಂಟ್ವಾಳ, ಬಿ.ಸಿ.ರೋಡ್, ವಿಟ್ಲ ಪೇಟೆಯಷ್ಟೇ ಅಲ್ಲ, ಹಳ್ಳಿ ಪ್ರದೇಶಗಳಲ್ಲೂ ಮೊದಲ ಮಳೆ ಸೆಖೆಗೆ ತಂಪೆರೆದರೆ, ಜನಜೀವನವನ್ನಿಡೀ ಅಸ್ತವ್ಯಸ್ತ ಉಂಟುಮಾಡಿತು. ಕೆಲವೊಂದೆಡೆ ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳು, ಕೃಷಿ ಸಂಬಂಧಿ ಚಟುವಟಿಕೆಗಳು, ರಸ್ತೆ ಇತ್ಯಾದಿ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳಿಗೆ ಮಳೆಯಿಂದ ಅಡ್ಡಿಯುಂಟಾದವು. ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್ಸೊಂದು ಬಂಟ್ವಾಳ ತಾಲೂಕಿನ ಮಾಣಿ ರಾಷ್ಟ್ರೀಯ ಹೆದ್ದಾರಿ ಸಮೀಪ ಬುಧವಾರ ಸಂಜೆ ರಸ್ತೆ ಬದಿಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟರೆ, ಬಸ್ ಕಂಡಕ್ಟರ್ ಸೇರಿ ಸುಮಾರು ೧೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಣಿನಾಲ್ಕೂರು ಗ್ರಾಮದಲ್ಲಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವ ಗಾಯಗೊಂಡಿದ್ದಾರೆ.
ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಬಿ.ಸಿ.ರೋಡ್, ಬಂಟ್ವಾಳ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಗಾಳಿ ಮಳೆಯಿಂದ ತಂಪಾದ ವಾತಾವರಣ ಸೃಷ್ಟಿಯಾಯಿತಾದರೂ, ಗುಡುಗು, ಸಿಡಿಲಿನ ಅಬ್ಬರ, ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿದ್ದ ಮಣ್ಣು ರಸ್ತೆಯ ಮಧ್ಯೆಯೇ ರಾಡಿಯಾಗಿ ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿತು.
ಬಿ.ಸಿ.ರೋಡಿನ ಗಣೇಶ್ ಮೆಡಿಕಲ್ಸ್ ಎದುರು ಇಡೀ ರಸ್ತೆಯಲ್ಲಿ ನೀರು ನಿಂತರೆ, ಫ್ಲೈಓವರ್ ಅಡಿಯಲ್ಲಿ ಸರ್ವೀಸ್ ರೋಡ್ ಪಕ್ಕ ಕೃತಕ ಕೆರೆ ಸೃಷ್ಟಿಯಾಯಿತು. ಮಿನಿ ವಿಧಾನಸೌಧ ಒಳಗೆಯೂ ನೀರು ತುಂಬಿದ ಪರಿಣಾಮ, ಸಿಬ್ಬಂದಿಗಳೆಲ್ಲ ಸೇರಿ ನೀರು ಹೊರಚೆಲ್ಲಬೇಕಾಯಿತು.
ಗಾಳಿ, ಮಳೆಯಿಂದ ವಿದ್ಯುತ್ ಪೂರೈಕೆ, ಅಂತರ್ಜಾಲ ಸೇವೆಗೆ ಅಡಚಣೆ ಉಂಟಾಯಿತು. ದೂರವಾಣಿ ಕೇಬಲ್, ಟಿ.ವಿ.ಕೇಬಲ್ ಗಳು ಹಾದು ಹೋಗುತ್ತಿದ್ದ ಜಾಗದಲ್ಲಿ ಸಣ್ಣಪುಟ್ಟ ಗೆಲ್ಲುಗಳು ಬಿದ್ದ ಪರಿಣಾಮ ತೊಂದರೆ ಉಂಟಾಯಿತು.ಸರ್ವೀಸ್ ರಸ್ತೆ ಅರ್ಧಂಬರ್ಧ ಕಾಮಗಾರಿ ನಡೆದ ಕಾರಣ ಎತ್ತರದ ಜಾಗದಿಂದ ತಗ್ಗು ಪ್ರದೇಶಕ್ಕೆ ವಾಹನಗಳು ಸಂಚರಿಸಲು ಪರದಾಡಿದವು.