www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಾವ್ಯ ಮತ್ತು ಸಂಗೀತಗಳಲ್ಲಿ ಪದಭಾವ ಮತ್ತು ರಾಗಭಾವ ರೂಪದಲ್ಲಿ ಗಮಕ ಕಲೆಯು ನಿಹಿತವಾಗಿರುವುದರಿಂದ ಈ ಕಲೆ ಸನಾತನ ಲಲಿತಕಲೆ ಎಂದು ಬಂಟ್ವಾಳ ತಾಲೂಕು ಗಮಕ ಸಮ್ಮೇಳನದ ಸರ್ವಾಧ್ಯಕ್ಷ ಎಳೆಯರ ಗೆಳೆಯ ಮುಳಿಯ ಶಂಕರ ಭಟ್ ಹೇಳಿದರು.
ಗಮಕ ಕಲಾ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಂಚಿ ಆಶ್ರಯದಲ್ಲಿ ಜೀಣೋದ್ಧಾರಗೊಳ್ಳುತ್ತಿರುವ ಮಂಚಿ ಶ್ರೀ ಗೋಪಾಲಕೃಷ್ಣ ದೇವಾಸ್ಥಾನದ ವಠಾರದಲ್ಲಿ ಭಾನುವಾರ ನಡೆದ ತಾಲೂಕಿನ ಮೊದಲ ಗಮಕ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಒಂದು ಭಾಷಾ ಸಾಹಿತ್ಯದ ಗದ್ಯ ಪದ್ಯ ರಚನೆಗಳನ್ನು ವಾಚಿಸುವ ಕ್ರಮವನ್ನು ನಿರ್ದೇಶಿಸುವ ಶಾಸ್ತ್ರವೇ ಗಮಕ ಕಲೆ. ಗಾಯನ ಮತ್ತು ಕಾವ್ಯಗಳೆರಡರ ಬಂಧವನ್ನು ಪ್ರತಿಪಾದಿಸುವ ವಿಶಿಷ್ಠ ಕಲೆ ಇದಾಗಿದೆ, ಗಮಕ ಕಲೆ ಏಕಕಾಲದಲ್ಲಿ ಸಾಹಿತ್ಯ ಮತ್ತು ಸಂಗೀತದ ಸೌರಭ ಮತ್ತು ಸೌಂದರ್‍ಯವನ್ನು ಪ್ರತಿಫಲಿಸುತ್ತದೆ ಎಂದರು.
ಭಾಷಾ ಭೋದಕರು ರಸವತ್ತಾಗಿ ಹಾಡುವುದು ಶಿಕ್ಷಕ ವೃತ್ತಿಗೆ ತಕ್ಕುದಲ್ಲ ಎಂದು ಭಾವಿಸಿದಂತಿದೆ, ಚಂಪೂಕಾವ್ಯಗಳಿಗೆ ವ್ಯಾಖ್ಯಾನ ಅಗತ್ಯ. ಷಟ್ಪದಿ ಕಾವ್ಯಗಳಿಗೆ ಅಗತ್ಯವಿಲ್ಲ ಎಂಬ ಅಭಿಪ್ರಾಯವಿದೆ. ಕ್ಲಿಷ್ಟ ಪದಗಳು, ಸಂಭಾಷಣೆಗಳು ಒದಗಿದಾಗ ಗಮಕಿಯು ಎಷ್ಟೇ ಅರ್ಥವತ್ತಾಗಿ ಹಾಡಿದ್ದಲ್ಲಿ ಶೋತೃಗಳಿಗೆ ಅರ್ಥವಾಗುವುದು ಕಷ್ಟವಾಗುತ್ತದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಗಮಕ ಕಲಿಕೆ:
ಗಮಕ ಕಲೆಗೆ ಸರಕಾರದ ಪ್ರೋತ್ಸಾಹದ ಅಗತ್ಯವಿದ್ದು, ಶಾಲಾ ಕಾಲೇಜುಗಳಲ್ಲಿ ಗಮಕ ಕಲಿಸುವ ಕಾರ್ಯ ಆಗಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸಹಕಾರ ನೀಡುತ್ತಿದೆ, ಪುರಾಣ ಸಾಹಿತ್ಯದ ಮೌಲ್ಯಗಳನ್ನು ತಿಳಿಸುವ ಹಾಗೂ ಧಾರ್ಮಿಕ ಜಾಗೃತಿಯಲ್ಲಿ ಉತ್ತಮ ಮಾಧ್ಯಮವಾಗಿರುವ ಗಮಕ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಆದ್ದರಿಂದ ಗಮಕ ಸಮ್ಮೇಳನಕ್ಕೂ ಸರಕಾರ ಆರ್ಥಿಕ ಸಹಾಯವನ್ನು ನೀಡಬೇಕೆಂದು ಆಗ್ರಹಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ಮಾತನಾಡಿ ಗಮಕ ಕಲೆಗೆ ಹಿಂದೆ ರಾಜಾಶ್ರಯವಿತ್ತು. ಕಾವ್ಯವಾಚನ, ಪುರಾಣ ವಾಚನಗಳು, ನಿರಂತರವಾಗಿ ನಡೆಯುತ್ತಿತ್ತು. ಪುರಾಣ ಕಾವ್ಯಗಳ ವಾಚನಾಸಕ್ತಿ ಕಡಿಮೆಯಾಗುತ್ತಿದ್ದು ಶಾಲಾ ಪಠ್ಯ ಪುಸಕ್ತಗಳಲ್ಲಿ ಗಮಕ ಕಲೆಯ ಪರಿಚಯವಿರಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯ ಅಗತ್ಯವಿದೆ, ಪರಂಪರಾಗತವಾಗಿ ಬಂದಿರುವ ಕಲೆ ಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದರು.
ಗಮಕಿ ಗಣಪತಿ ಪದ್ಯಾಣ, ಸಮ್ಮೇಳನದ ಸರ್ವಾಧ್ಯಕ್ಷ ಎಳೆಯರ ಗೆಳೆಯ ಮುಳಿಯ ಶಂಕರಭಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋಹನ್ ರಾವ್, ತಾಲೂಕು ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಕೊಳಕೆ ಗಂಗಾಧರ ಭಟ್ ಉಪಸ್ಥಿತರಿದ್ದರು. ತಾಲೂಕು ಗಮಕ ಪರಿಷತ್ತಿನ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ವಂದಿಸಿದರು, ನಿವೃತ್ತ ಉಪಾನ್ಯಾಸಕ ಕೆ.ಎನ್ ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.