ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ – ಸಿಒಡಿಪಿ (ರಿ) ಮಂಗಳೂರು ಪ್ರಾಯೋಜಕತ್ವದಲ್ಲಿ ಸಹಜೀವನ ಜಿಲ್ಲಾ ಒಕ್ಕೂಟ ಮತ್ತು ನಮನ ತಾಲೂಕು ಒಕ್ಕೂಟಗಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಗುರುವಾರ ನಡೆಯಿತು.
ಬೆಳಗ್ಗೆ ನಡೆದ ರ್‍ಯಾಲಿಯನ್ನು ಪುರಸಭೆ ಸದಸ್ಯೆ ಯಾಸ್ಮೀನ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂದನೀಯ ರಿಚಾರ್ಡ್ ಕುವೆಲ್ಲೊ ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆರೋಗ್ಯಕರ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವೃತ್ತ ಪ್ರೊಫೆಸರ್ ಡಾ. ರಿಟಾ ನೊರೊನ್ಹ, ಮಹಿಳೆಯರ ಇಂದಿನ ಸ್ಥಿತಿಗತಿ ಹಾಗೂ ಹಕ್ಕುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಕುರಿತು ಬೆಳಕು ಚೆಲ್ಲಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಗ್ರೇಸಿ ಡಿಸೋಜ, ಕಾರ್ಮಿಕ ಇಲಾಖೆಯಲ್ಲಿ ಮಹಿಳೆಯರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಜಿಪಂ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ಕೌಟುಂಬಿಕ ಬದುಕಿನಲ್ಲೂ ಮಹಿಳೆಯರ ಪಾತ್ರ ಹಿರಿದು, ಇಂದು ವೃದ್ಧಾಶ್ರಮವಾಗುತ್ತಿರುವ ಹಳ್ಳಿ, ಪಟ್ಟಣಗಳು ಹಾಗೂ ಕೌಟುಂಬಿಕ ಬದುಕಿನಲ್ಲಿ ಮೂಡುವ ಭಿನ್ನ ಅಭಿಪ್ರಾಯಗಳನ್ನು ಜಾಣ್ಮೆಯಿಂದ ಸರಿದೂಗಿಸಿಕೊಂಡು ಹೋಗುವಲ್ಲಿ ಮಹಿಳೆಯ ಪಾತ್ರ ಹಿರಿದು ಎಂದು ಹೇಳಿದರು.
ಈ ಸಂದರ್ಭ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಸವಿತಾ ಶಂಭೂರು, ಜನಾರ್ದನ ಕುಲಾಲ್, ಶಂಶದ್, ಕೌರಿನ್ ರಸ್ಕಿನ್ಹ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರ ಮತ್ತು ರಕ್ತದಾನ ಮಹತ್ವದ ಬಗ್ಗೆ ಮಾಹಿತಿ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಆರೋಗ್ಯ ಕಾರ್ಡು ನೋಂದಾವಣೆ, ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಹಜೀವನ ಒಕ್ಕೂಟದ ದ.ಕ. ಜಿಲ್ಲಾಧ್ಯಕ್ಷ ಕಾಸ್ಮಿರ್ ಡಿಸೋಜ, ನಮನ ಮಹಿಳಾ ಒಕ್ಕೂಟದ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷೆ ಭಾರತಿ ಚೌಟ, ಸಿಒಡಿಪಿ ನಿರ್ದೇಶಕ ಓಸ್ವಲ್ಡ್ ಮೊಂತೆರೋ, ಲೆನೆಟ್ ಗೊನ್ಸಾಲ್ವೀಸ್ ಉಪಸ್ಥಿತರಿದ್ದರು. ಸಿರಿಲ್ ವಾಸ್, ವಿಲ್ಮಾ ಕಾರ್ಯಕ್ರಮ ನಿರೂಪಿಸಿದರು. ರೀಟಾ ಡಿಸೋಜ ವಂದಿಸಿದರು.