ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ೭೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಜ್ಞಾನ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಜ್ಞಾನ ಮಂದಿರ ನಿರ್ಮಾಣಕ್ಕೆ ದೈವಾನುಗ್ರಹ ಪ್ರಾಪ್ತಿಗಾಗಿ ನಡೆದ ವಿಶೇಷ ಚಂಡಿಕಾ ಹೋಮ, ಭೂಮಿ ಪೂಜೆಯಲ್ಲಿ ಅವರು ಪಾಲ್ಗೊಂಡರು.
ಬಳಿಕ ಮಾತನಾಡಿ ನಮ್ಮ ಮನಸ್ಸಿನಲ್ಲಿ ದೈವತ್ವ ಮತ್ತು ರಾಕ್ಷಸತ್ವ ತುಂಬಿರುತ್ತದೆ. ನಾವು ಅದಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎಂದು ತಿಳಿದು ನಿಯಂತ್ರಿಸಬೇಕು ಎಂದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ಜ್ಞಾನ ಮಂದಿರ ನಿರ್ಮಾಣಕ್ಕೆ ಈಗಾಗಲೇ ೭೨.೪೦ ಲಕ್ಷ ರೂ. ಮಂಜೂರಾತಿ ಟೆಂಡರ್ ಆಗಿದ್ದು, ಮೊದಲ ಮಹಡಿ ನಿರ್ಮಾಣಕ್ಕೆ ಇನ್ನೂ ಒಂದು ಕೋಟಿ ರೂ. ವೆಚ್ಚದ ಯೋಜನೆ ಪ್ರಸ್ತಾವನೆಯಲ್ಲಿದೆ. ಇಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ ನಿರ್ಮಾಣ ಕಾಮಗಾರಿ ನಿರ್ವಹಿಸುವರು. ಮುಂದಕ್ಕೆ ಇದೇ ಕಟ್ಟಡ ತಳದಲ್ಲಿ ಕ್ಷೇತ್ರದಲ್ಲಿ ಅಪರ ಕ್ರಿಯೆಗಳನ್ನು ನಿರ್ವಹಿಸಲಾಗುತ್ತದೆ. ಜನರಿಗೆ ಸ್ನಾನ ಮಾಡುವುದಕ್ಕೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದಕ್ಕೆ ನದಿ ಪ್ರದೇಶದ ನೈರ್ಮಲ್ಯಕ್ಕೆ ಇದರಿಂದ ಪ್ರಯೋಜನ ಆಗಲಿದೆ ಎಂದರು.
ಲೊಕೋಪಯೋಗಿ ಇಲಾಖೆ ವಿಶ್ರಾಂತ ಇಂಜಿನಿಯರ್ ಸೀತಾರಾಮ ಆಚಾರ್ ಯೋಜನೆಯ ವಿಸ್ಕೃತ ರೂಪುರೇಖೆ ರಚಿಸಿದ್ದು ಮಂಜೂರಾತಿಗೆ ಸಹಕರಿಸಿದ್ದರು
ಪ್ರವಾಸೋದ್ಯಮ ಇಲಾಖೆಯ ಮೂಲಕ ಕ್ಷೇತ್ರದಿಂದ ಪಾಣೆಮಂಗಳೂರು ನಗರಕ್ಕೆ ಸಂಪರ್ಕಿಸುವ ಹೊಸ ರಸ್ತೆ ಸೇತುವೆ ನಿರ್ಮಾಣಕ್ಕೆ ೬ ಕೋಟಿ ರೂ. ವೆಚ್ಚದ ಯೋಜನೆ ಸರಕಾರದ ಮಟ್ಟದಲ್ಲಿ ಮಂಜೂರಾತಿ ಹಂತದಲ್ಲಿದೆ. ಎಂದರು. ಶೀಘ್ರದಲ್ಲಿ ಈ ಎಲ್ಲ ಕೆಲಸಗಳನ್ನು ಮಾಡಲು ದೇವರು ಶಕ್ತಿಯನ್ನು ನೀಡಲಿ. ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಿ ಎಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಕೆಲಸ ಕಾರ್ಯಗಳು ಭರದಿಂದ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ಡಿ.ಎಂ. ಕುಲಾಲ್, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾಧರ ಭಟ್ ಕೊಳಕೆ, ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ, ಅಣ್ಣು ನಾಯ್ಕ, ರಮಾ ಎಸ್.ಭಂಡಾರಿ, ಪ್ರಧಾನ ಅರ್ಚಕ ವೇ|ಮೂ| ಮಹೇಶ್ ಭಟ್, ಮೆನೇಜರ್ ರಾಮಕೃಷ್ಣ ಭಂಡಾರಿ ಉಪಸ್ಥಿತರಿದ್ದರು. ವೇ|ಮೂ| ಶಿವರಾಮ ಮಯ್ಯ ತನ್ನಚ್ಚಿಲು ಮತ್ತು ಬಳಗದವರು ವಿಶೇಷ ಚಂಡಿಕಾ ಹೋಮ ಪೌರೋಹಿತ್ಯ ನಿರ್ವಹಿಸಿದರು.