ಬಂಟ್ವಾಳ

ಕೈಕುಂಜೆ ಹಳೇ ಕಟ್ಟಡ ತೆಗೆದು ಹೊಸ ವಾಣಿಜ್ಯ ಸಂಕೀರ್ಣ

  • ಬಂಟ್ವಾಳ ಪುರಸಭೆ ಬಜೆಟ್ ಮಂಡನೆಯಲ್ಲಿ ಪ್ರಸ್ತಾಪ

ಬೆಳೆಯುತ್ತಿರುವ ಕೈಕುಂಜೆ ಪರಿಸರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಬಂಟ್ವಾಳ ಪುರಸಭೆ ಮುಂದಾಗಿದೆ. ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಬುಧವಾರ ಪುರಸಭೆಯ ವಿಶೇಷ ಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಇದಕ್ಕಾಗಿ 50 ಲಕ್ಷ ರೂಗಳನ್ನು ಮೀಸಲಿರಿಸಿದ್ದಾರೆ. ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಪುರಸಭಾ ಕಟ್ಟಡ ತೆರವುಗೊಳಿಸಿ ವಾಣಿಜ್ಯ‌ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವನೆ ಇದರಲ್ಲಿದೆ.

ಬಿ.ಸಿ.ರೋಡ್ ಹಾಗೂ ಕೈಕಂಬದಲ್ಲಿ ಶುದ್ದ ನೀರಿನ ಘಟಕ ರಚನೆ, ಬಿ.ಸಿ.ರೋಡಿನ ಮೇಲು ಸೇತುವೆಯಡಿ ಪೇ ಪಾರ್ಕಿಂಗ್ ವ್ಯವಸ್ಥೆಗಾಗಿ ಇಂಟರ್ ಲಾಕ್ ಅಳವಡಿಕೆ, ಬೀದಿಬದಿ ವ್ಯಾಪಾರಸ್ಥರಿಗಾಗಿ ಬಡ್ಡಕಟ್ಟೆಯಲ್ಲಿ ತೆರೆದ ಮಾರುಕಟ್ಟೆ ನಿರ್ಮಾಣ, ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಇಂಟರ್ ಲಾಕ್ ಅಳವಡಿಸುವುದು ಸಹಿತ ಅಂಗಡಿ ಮಳಿಗೆ ನಿರ್ಮಾಣ ,ಪುರಸಭಾ ವ್ಯಾಪ್ತಿಯ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರ ಅಳವಡಿಕೆಗೆ ನಿರ್ಧರಿಸಲಾಗಿದೆ.

ಮೈರಾನ್ ಪಾದೆಯಲ್ಲಿ ಪ.ಜಾತಿ ಕಾಲೋನಿಯಲ್ಲಿ ರಂಗಮಂದಿರ, ಅರಬಿಗುಡ್ಡೆಯಲ್ಲಿ ಪ.ಜಾ.ಪಂಗದವರಿಗೆ ಸಮುದಾಯ ಭವನ ನಿರ್ಮಾಣ, ಬಿ.ಮೂಡ ಗ್ರಾಮದ ದೇರ್ಲ ಎಂಬಲ್ಲಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು,ಮಂಡಾಡಿಯಲ್ಲಿ  ಜಿ+3 ಮಾದರಿಯಲ್ಲಿ ವಸತಿ ಸಮುಚ್ಚಯ, ನೇರಂಬೋಳಿನಲ್ಲಿ 350 ಫಲಾನುಭವಿಗಳಿಗೆ ನಿವೇಶನ ಹಂಚಿಕೆ, ಪೌರಕಾರ್ಮಿಕರಿಗೆ ಕೊರಗುಂಡಿಯಲ್ಲಿ ಜಿ+3 ಮಾದರಿಯಲ್ಲಿ ವಸತಿಗೃಹ ನಿರ್ಮಾಣ, ಪುರಸಭಾ ಕಚೇರಿ ಹಿಂಭಾಗದಲ್ಲಿ ಶೆಡ್ ನಿರ್ಮಿಸಿ ಅದರ ಮೇಲ್ಬಾಗದಲ್ಲಿ ಪುರಸಭಾಧಿಕಾರಿ ಮತ್ತು ನೌಕರರಿಗೆ ವಸತಿಗೃಹ ರಚನೆ,ವೈಜ್ಙಾನಿಕವಾಗೊ ತ್ಯಾಜ್ಯ ವಿಲೇವಾರಿಗೆ ಕಂಚಿನಡ್ಕಪದವಿನಲ್ಲಿ  ಫೈರೋಲಿಸಿಸ್ ಯಂತ್ರ ಅಳವಡಿಕೆ, ಕಸ ಸಂಗ್ರಹಕ್ಕಾಗಿ 7 ಆಟೋ ಟಿಪ್ಪರ್,1 ಕಾಂಪಾಕ್ಟರ್ ವಾಹನ ಖರೀದಿ ವಿಚಾರ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

60,75,843 ರೂ.ವಿನ ಮಿಗತೆ  ಅಯವ್ಯಯ ಹೀಗಿದೆ. ಪುರಸಭೆಯ ಸ್ವಂತ ಆದಾಯದಿಂದ 5,83,10,350 ರೂ, ಸರಕಾರದಿಂದ ಯೋಜನೇತರ ಅನುದಾನ 4,90,25,000 ರೂ.ಕೇಂದ್ರದ 14 ನೇ ಹಣಕಾಸು ಆಯೋಗ ಹಾಗೂ ರಾಜ್ಯ ಹಣಕಾಸು ಆಯೋಗದಿಂದ 7,61,39,000 ಅನುದಾನವನ್ನು ನಿರೀಕ್ಷಿಸಲಾಗಿದ್ದು, ಆರಂಭಿಕ ಶಿಲ್ಕು ಸಹಿತ ಒಟ್ಟು 35,19,41,488. ರೂ.ಆದಾಯವನ್ನು ನಿರೀಕ್ಷಿಸಲಾಗಿದೆ. 34,58,65,646 ರೂ.ಖರ್ಚುಅಂದಾಜಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ  ಪುರಸಭಾ ವ್ಯಾಪ್ತಿಯಲ್ಲಿ ಸರಕಾರದ ವಿಶೇಷ ಅನುದಾನ ಹಾಗೂ ಪುರಸಭಾ ನಿಧಿಯಿಂದ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಬಿಜೆಪಿ ವಿರೋಧ:

ಅಯವ್ಯಯದಲ್ಲಿ ಕೋಟ್ಯಾಂತರ ರೂ.ವ್ಯತ್ಯಾಸಗಳು ಕಂಡು ಬಂದಿದ್ದು, ಕೌನ್ಸಿಲ್ ಸಭೆ ಅನುಮೋದನೆಯಿಲ್ಲದೆ ಮಾಡಲಾದ ಹೆಚ್ಚುವರಿ ಖರ್ಚಿಗೆ ಈಗ ಮಂಜೂರಾತಿ ಪಡೆಯಲು ಅವಕಾಶವಿದೆಯೇ ಖರ್ಚಿನ ಕುರಿತು ಪೂರಕ ದಾಖಲೆ ಒದಗಿಸಿ, ಆಬಳಿಕ ಪ್ರಸ್ತುತ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯಿರಿ ಎಂದು ಸದಸ್ಯರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು ಪಟ್ಟು ಹಿಡಿದರು.

ಕಳೆದ ಸಾಲಿನ ಬಜೆಟ್ ನಲ್ಲಾಗಿರುವ ವ್ಯತ್ಯಾಸದ ಕುರಿತು ಸರಿಪಡಿಸುವ ಮಾತು ಕೊಟ್ಟು ವರ್ಷ ಪೂರೈಸಿದರೂ ಇನ್ನು ಸಮರ್ಪಕ ಮಾಹಿತಿ ನೀಡಲುಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದೇ ವೇಳೆ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ ನೀಡಲಾಗುವ ಮಾಸಿಕ ಜಮಾ- ಖರ್ಚಿನ ಲೆಕ್ಕದಲ್ಲೂ ಮಂಡಿಸಲಾದ ಪ್ರಸಕ್ತ ಸಾಲಿನ ಅಯವ್ಯಯದಲ್ಲೂ ಒಟ್ಟು 11.65ಕೋ.ರೂ.ವ್ಯತ್ಯಾಸ ಕಂಡು ಬರುತ್ತಿದೆ ಎಂದು ಅಂಕಿ ಅಂಶಗಳ‌ ಸಹಿತವಾಗಿ ಸದಸ್ಯ ದೇವದಾಸ ಶೆಟ್ಟಿ ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಗೋವಿಂದ ಪ್ರಭು ಮೂರು ದಿನದ ಹಿಂದೆ ಬಜೆಟ್ ಪುಸ್ತಕ ಸಿಕ್ಕಿದಾಗಲೇ ಇದರಲ್ಲಿ ಅಗಿರುವ ಲೋಪ, ಲೆಕ್ಕಾಚಾರದ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರೂ ಅದನ್ನು ಸರಿಪಡಿಸುವ ಆಸಕ್ತಿ ವಹಿಸಿಲ್ಲ ಎಂದು ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.  ಸಭೆಯಲ್ಲಿ ಹಾಜರಿದ್ದ ಪುತ್ತೂರು ನಗರಸಭೆಯ ಲೆಕ್ಲಾಧಿಕ್ಷಕರಾದ ಸಿ.ಆರ್.ದೇವಾಡಿಗ ಅವರು ಲೆಕ್ಕದಲ್ಲಾಗಿರುವ ವ್ಯತ್ಯಾಸದ ಬಗ್ಗೆ ಸಮಜಾಯಿಷಿ ನೀಡಿದರಾದರೂ ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ, ಕಂಪ್ಯೂಟರ್ ನಲ್ಲಿ ದಾಖಲಾದ ಮಾಹಿತಿಯನ್ನಾಧರಿಸಿ ಅಯವ್ಯಯವನ್ನು ಸಿದ್ದಪಡಿಸಲಾಗಿದೆ. ಅದಕ್ಕೆ ಫೀಡಿಂಗ್ ಅಗಿರವಲ್ಲಿ‌  ವ್ಯತ್ಯಾಸ ವಾಗಿರಲು ಬಹುದು ಅಥವಾ ಬೇರೆ ಖಾತೆಯಲ್ಲಿ ಹಣ ಜಮೆಯಾಗಿರಬಹುದು ಎಂದು ಸಿ.ಆರ್.ದೇವಾಡಿಗ ಉತ್ತರಿಸಿದರು.

ಕೊನೆಗೆ‌ ಕಳೆದ ಸಾಲಿನ ಲೆಕ್ಕಾಚಾರದಲ್ಲಾಗಿರುವ ವ್ಯತ್ಯಾಸದ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಸೂಕ್ತ ವಿವರಣೆ ನೀಡುವುದಾಗಿ ‌ಮುಖ್ಯಾಧಿಕಾರಿ ರೇಖಾ ಶೆಟ್ಟಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರಸ್ತುತ ಸಾಲಿನ ಬಜೆಟ್ ಮೇಲೆ ಚರ್ಚೆ ಮುಂದುವರಿಯಿತು.  ಪ್ರಸಕ್ತ ಸಾಲಿನ ಬಜೆಟ್ ನಲ್ಲೂ ಜಮಾ-ಖರ್ಚಿನ ಲೆಕ್ಕದಲ್ಲಾಗಿರುವ ವ್ಯತ್ಯಾಸವನ್ನು  ಅಂಕಿಅಂಶ ಸಹಿತವಾಗಿ ಸದಸ್ಯ ದೇವದಾಸ ಶೆಟ್ಟಿ ಸಭೆಯ ಗಮನಸೆಳೆದರು.

ಈ ಮಧ್ಯ ಚರ್ಚೆ ಪುರಸಭೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ವಿಚಾರವು ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೂ ಕಾರಣವಾಯಿತು.ಆಡಳಿತ ವ್ಯವಸ್ಥೆ ಸರಿಯಾಗುವ ನಿಟ್ಟಿನಲ್ಲಿ ಯಾರು ಭ್ರಷ್ಟಚಾರದಲ್ಲಿ ಶಾಮೀಲಾಗಿದ್ದಾರೆಂಬುದನ್ನು ಪುರಾವೆ ಸಹಿತ ಬಹಿರಂಗ ಪಡಿಸುವಂತೆ ಆಡಳಿತ ಪಕ್ಷದ ಸದಸ್ಯ‌ಸದಾಶಿವ ಬಂಗೇರ ಅವರು ಸವಾಲು ಹಾಕಿದರು. ಪ್ರತಿ ಸವಾಲು ಹಾಕಿದ ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ನೀವು ಬೇಕಾದಲ್ಲಿ ನಮ್ಮ ಬಗ್ಗೆಯು ದಾಖಲೆ ಸಂಗ್ರಹಿಸಿ ನಮ್ಮ ಹಗರಣ ಬಯಲಿಗೆ ತನ್ನಿ‌ ನಿಮ್ಮವರ ಜಾತಕ ಬಯಲಿಗೆ ಈ ಕ್ಷಣದಲ್ಲಿ ಬಹಿರಂಗ ಪಡಿಸುತ್ತೇವೆ ಈ ಬಗ್ಗೆ ಪಂಥಾಹ್ವಾನಕ್ಕೂ ಸಿದ್ದವರಿದ್ದೇವೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಮಾತನಾಡಿ, ವಯಕ್ತಿಕ ವಿಚಾರದಲ್ಲಿ ಚರ್ಚೆಬೇಡ ಅಯವ್ಯಯದ ಕುರಿತು ಆರೋಗ್ಯಕರ ಚರ್ಚೆ ನಡೆಸೋಣ ಎಂದರು. ಸದಸ್ಯ ಪ್ರವೀಣ್ ಮತ್ತು ಚಂಚಲಾಕ್ಷಿ ಅವರೂ ಚರ್ಚೆಯಲ್ಲಿ ಪಾಲ್ಗೊಂಡರು.

ಬಳಿಕ ಬಿಜೆಪಿಯ ನಾಲ್ವರು ಸದಸ್ಯರು ಲೆಕ್ಕಾಚಾರದಲ್ಲಿ ವ್ಯತ್ಯಾಸವಿರುವ ಹಿನ್ನಲೆಯಲ್ಲಿ  ಪ್ರಸ್ತುತ ಸಾಲಿನ ಅಯವ್ಯಯಕ್ಕೆ ಲಿಖಿತ ಅಕ್ಷೇಪ ಸಲ್ಲಿಸಿದರೆ,ಎಸ್ .ಡಿ. ಪಿ. ಐ.  ಮುಂದಿನ ಸಭೆಯೊಳಗೆ ಲೆಕ್ಕಾಚಾರವನ್ನು ಸರಿಪಡಿಸುವ ವಿಶ್ವಾಸವನ್ನಿಟ್ಟುಕೊಂಡು ಬಜೆಟ್ ಗೆ  ಅನುಮೋದನೆ ನೀಡುವುದಾಗಿ ಸದಸ್ಯ ಇಕ್ಬಾಲ್ ಗೂಡಿನಬಳಿ ಪ್ರಕಟಿಸಿದರು.

ನಂತರ ಪ್ರಸ್ತುತ ಸಾಲಿನ ಅಯವ್ಯಯವನ್ನು ಬಹುಮತದಿಂದ ಅಂಗೀಕರಿಸಲಾಗಿದ್ದು,ವಿಪಕ್ಷ ಸದಸ್ಯರ ಆಕ್ಷೇಪವನ್ನು ನಿರ್ಣಯದಲ್ಲಿ ದಾಖಲಿಸಲಾಗುವುದು ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸಭೆಗೆ ತಿಳಿಸಿದರು.ಉಪಾಧ್ಯಕ್ಷ ಮಹಮ್ಮದ್ ನಂದರ ಬೆಟ್ಟು,ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ,ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಹಾಜರಿದ್ದರು.ಸದಸ್ಯರಾದ ಪ್ರವೀಣ್ ಬಿ.,ಗಂಗಾಧರ್,ಮೋಹನ್ ಬಿ.,ಶರೀಫ್, ಜಗದೀಶ್ ಕುಂದರ್ ಚಂಚಲಾಕ್ಷಿ, ವಸಂತಿ, ಸುಗುಣ ಕಿಣಿ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts