ಬಂಟ್ವಾಳ

ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ:ಮಾ.4ರಂದು ಬ್ರಹ್ಮಕಲಶಾಭಿಷೇಕ

  • ಫೆ.27ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭ
  • ಮಾ.4ರವರೆಗೆ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಮಾ.4ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಈ ಪ್ರಯುಕ್ತ ಫೆ.27ರಿಂದ ಮಾ.4ವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದೇವಳ ವಠಾರದಲ್ಲಿ ಆಡಳಿತ ಮೊಕ್ತೇಸರ ಮತ್ತು ಟ್ರಸ್ಟಿ ಕಲ್ಲೇಗ ಸಂಜೀವ ನಾಯಕ್ ಮತ್ತು ಮೊಕ್ತೇಸರ ಎಂ.ಎಂ.ಪ್ರಭು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

27ರಿಂದ ಬ್ರಹ್ಮಕಲಶ ನಿಮಿತ್ತ ನಾನಾ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 1ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಕಮಲಾದೇವಿಪ್ರಸಾದ್ ಆಸ್ರಣ್ಣ ಆಶೀರ್ವಚನ ನೀಡುವರು. ಮಾ.2ರಂದು ಬೆಳಗ್ಗೆ ಧಾರ್ಮಿಕ ಉಪನ್ಯಾಸವಿದ್ದು, ಸಂಜೆ 4ಕ್ಕೆ ದಾಭೋಲಿ ಶ್ರೀಮಠ್ ಸಂಸ್ಥಾನಂನ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಆಗಮಿಸುವರು. ಬಳಿಕ ಸಂಜೆ 6ರಿಂದ ಧಾರ್ಮಿಕ ಸಭೆ ನಡೆಯಲಿದೆ.  ಮಾ.3ರಂದು ಬೆಳಗ್ಗೆ ದಾಭೋಲಿ ಶ್ರೀಗಳ ಉಪಸ್ಥಿತಿಯಲ್ಲಿ ಉಪನ್ಯಾಸವಿದೆ. ಸಂಜೆ ಧಾರ್ಮಿಕ ಸಭೆ ನಡೆಯುತ್ತದೆ. 4ರಂದು ಬೆಳಗ್ಗೆ ಭದ್ರತಾ ಕೊಠಡಿ ಉದ್ಘಾಟನೆ ನಡೆಯುವುದು. ಬೆಳಗ್ಗೆ 9.30ರಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಸುಮಾರು ಎರಡೂವರೆ ಕೋಟಿ ರೂ.ವೆಚ್ಚದಲ್ಲಿ  ದೇವಳದ ಸುತ್ತುಪೌಳಿ,ನಮಸ್ಕಾರ ಮಂಟಪ,ಸುಸಜ್ಜಿತ ಯಾಗಶಾಲೆ,ನೂತನ ಗಣಪತಿಗುಡಿ,ನವಗ್ರಹಗುಡಿ, ಭದ್ತತಾಕೊಠಡಿ, ಕಾಳಭೈರವ ಗುಡಿಗೆ ತಾಮ್ರದ ಹೊದಿಕೆ,ಒಳಾಂಗಣಕ್ಕೆ ಗ್ರಾನೈಟ್ ಹಾಸುವಿಕೆ,ದೇವಳದ ರಾಜಾಂಗಣಕ್ಕೆ ಇಂಟರ್ ಲಾಕ್ ಅಳವಡಿಕೆ,ಕಲ್ಯಾಣ ಮಂಟಪ ವಿಸ್ತರಣೆ, ಅರ್ಚಕರಿಗೆ ಎರಡು ಮನೆ ನಿರ್ಮಾಣ,ತಾಮ್ರದ ಹೊದಿಕೆಯ ಧ್ವಜಸ್ತಂಭದ ನಿರ್ಮಾಣ,ಶ್ರೀ ದೇವರ ಅವಭೃತ ಕೆರೆ ನಿರ್ಮಾಣದ ಕಾಮಗಾರಿಗೊಂಡು ಇದೀಗ ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ ಎಂದರು.ಆದೇ ರೀತಿ ಶ್ರೀ ಕ್ಷೇತ್ರಕ್ಕಾಗಮಿಸುವ ಸ್ವಾಮೀಜಿಯವರು ತಂಗುವ ಉದ್ದೇಶದಿಂದ  ಪಕ್ಕದಲ್ಲಿಯೇ ಸುಂದರವಾದ ಗುರುಭವನದ ನಿರ್ಮಿಸಲಾಗಿದ್ದು,ದಾಭೋಲಿ ಶ್ರೀ ಮಠ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು  ಗುರುಭವನವನ್ನು ಪ್ರವೇಶಿಸುವ ಮೂಲಕ ಉದ್ಘಾಟಿಸಲಿದ್ದಾರೆ.ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶದ ವಿಧಿ,ವಿಧಾನಗಳು ಸಂಪನ್ನಗೊಳ್ಳಲಿದೆ.

ದಾಬೋಲಿ ಶ್ರೀ ಮಠ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ಭಜನೆ,ಹಾಡುಗಳು ಮಾದಲಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೂರದ ಮಹಾರಾಷ್ಟ್ರ,ಇಂದೋರ್ ಮೊದಲಾದೆಡೆಯಿಂದ  ಭಕ್ತರು ಅಗಮಿಸುವ ನಿರೀಕ್ಷೆ ಇದ್ದು,ಅವರಿಗೆ ವಸತಿ ವ್ಯವಸ್ಥೆಯನ್ನು  ಮಾಡಲಾಗಿದೆ ಎಂದು ಪ್ರಭು ವಿವರಿಸಿದರು.

ದೇವಳದ ವತಿಯಿಂದ ಹತ್ತು,ಹಲವು ಸಮಾಜಮುಖಿ ಕಾರ್ಯಕ್ರಮಗಳು,ಆರೋಗ್ಯತಪಾಸಣಾ,ಶೈಕ್ಷಣಿಕ ಶಿಬಿರಗಳ ಸಹಿತ ಉಪಯುಕ್ತ ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತಿದೆ.ಕಲ್ಯಾಣ ಮಂಟಪವನ್ನು ವಿಸ್ತರಿಸಿ ವಿವಿಧ ಸಮಾರಂಭಗಳಿಗೆ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಷ್ಟು ಯೋಜನೆಗಳನ್ನು ಹಾಗೂ ದಾನಿಗಳ ಸಹಕಾರದೊಂದಿಗೆ  ಪ್ರತಿನಿತ್ಯ ಅನ್ನ ಸಂತರ್ಪಣೆ ನಡೆಸುವ ಉದ್ದೇಶವು ಇದೆ ಎಂದರು. ಕ್ಷೇತ್ರಕ್ಕಾಗಮಿಸುವ ರಸ್ತೆಯನ್ನು ಡಾಮಾರೀಕರಣಗೊಳಿಸಿ ಅಬಿವೃದ್ದಿ ಪಡಿಸಿದ್ದಲ್ಲದೆ,ಇಲ್ಲಿನ ಕೆರೆಯೊಂದನ್ನು 40 ಲಕ್ಷ ರೂ.ವೆಚ್ಚದಲ್ಲಿ ದುರಸ್ಥಿ ಪಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ನೀಡಿದ್ದು,ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು  ದೇವಳದ ಜೀಣೋದ್ದಾರ ಕಾರ್ಯಕ್ಕೆ  ತಮ್ಮ ಕೇತ್ರದ ವತಿಯಿಂದ ಅನುದಾನವನ್ನು ನೀಡಿದ್ದು ,ಇವರಿಬ್ಬರಿಗೂ ದೇವಳದ ಆಡಳಿತ ಸಮಿತಿ ಅಭಾರಿಯಾಗಿದೆ ಎಂದರು.

ಬಾಳ್ತಿಲ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿಗೆ ಏತ ನೀರಾವರಿ ನೀರಾವರಿ ಯೋಜನೆ ಕಾರ್ಯಗತ ಗೊಳಿಸಬೇಕು ಹಾಗೂ ದಾಸಕೋಡಿಯಿಂದ ಒಳರಸ್ತೆಯಾಗಿ ಬಿ.ಸಿ.ರೋಡಿಗೆ ಸುಗಮ ಸಂಚಾರಕ್ಕೆ ಬಸ್ ನ ವ್ಯವಸ್ಥೆ ಕಲ್ಪಿಸುವಂತೆ ಈ ಸಂದರ್ಭದಲ್ಲಿ ಅವರು ಆಗ್ರಹಿಸಿದರು.

ಎಲ್ಲಿದೆ ಕ್ಷೇತ್ರ:

ಮಂಗಳೂರು-ಬೆಂಗಳೂರು ರಾ.ಹೆ.ಯ ದಾಸಕೋಡಿ ಯಿಂದ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ಕಶೆಕೋಡಿ ದೇವಾಲಯವಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸ ಹೊಂದಿರುವ ಕಶೆಕೋಡಿ ಶ್ರೀ ಲಕ್ಮೀ ವೆಂಕಟರಮಣ ದೇವಸ್ಥಾನ ಹಸಿರು ಪ್ರಕೃತಿಯ ದೈವೀತಾಣವಾಗಿ ಆಕರ್ಷಿಸುತ್ತಿದೆ. ಉತ್ತರದ  “ಗೌಡ್” ಎಂಬ ಪ್ರದೇಶದಲ್ಲಿ ನೆಲೆಸಿ ಕ್ರಮೇಣ ಮಹಾರಾಷ್ಟ್ರದ ಸಿಂಧು ದುರ್ಗಜಿಲ್ಲೆಯ ಕುಡಾಲಕ್ಕೆ ಬಂದು ನೆಲೆಸಿದರಿಂದ ಕುಡಾಲ ದೇಶಸ್ಥಗೌಡ್ ಬ್ರಾಹ್ಮಣರೆನಿಸಿಕೊಂಡರು.ವಲಸೆ ಬಂದಾಗ ತಮ್ಮ ಜತೆಯಲ್ಲಿ ತಾವು ಆರಾಧಿಸಿಕೊಂಡು ಬಂದ ದೇವರನ್ನು ತಂದು ಪೂಜೆ ಪುನಸ್ಕಾರಕ್ಕಾಗಿ ದೇವಸ್ಥಾನ ನಿರ್ಮಿಸಿಕೊಂಡರು.ಹೀಗೆ ಮುನ್ನೂರು ವರ್ಷದ ಹಿಂದೆ ಕಶೆಕೋಡಿಯಲ್ಲಿ ಈ ದೇವಸ್ಥಾನ ಸ್ಥಾಪನೆಗೊಂಡಿದೆ ಎಂದು ಪ್ರಭು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಕಲ್ಲೇಗ ಸಂಜೀವ ನಾಯಕ್,ಅನುವಂಶಿಕ ಮೊಕ್ತೇಸರರಾದ ಕಂಟೀಕ ಗೋಪಾಲ ಶೆಣೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಲ್ಲಗುಡ್ಡೆ ರಾಜಾರಾಮ ಪ್ರಭು, ಆಡಳಿತ ಸಮಿತಿ ಕಾರ್ಯದರ್ಶಿ ರಾಮ್ ಗಣೇಶ್ ಪ್ರಭು, ಕೋಶಾಧಿಕಾರಿ ಪ್ರಭಾಕರ ನಾಯಕ್ ದರ್ಬೆ, ಮಾರ್ಗದರ್ಶಕರಾದ ಕಂಟೀಕ ಅನಂತ ಶೆಣೈ, ಪ್ರಮುಖರಾದ ಯೋಗೀಶ್ ನಾಯಕ್, ಪ್ರಭಾಕರ ನಾಯಕ್, ರಾಜಾರಾಮ ನಾಯಕ್, ಕೆಂಚಪಾಲು ಬಾಲಕೃಷ್ಣ ಪ್ರಭು, ಅನಂತ ಶೆಣೈ, ಸುಧಾಕರ ಶೆಣೈ,  ರಮೇಶ್ ನಾಯಕ್, ದಯಾನಂದ ಭಟ್ ಹಾಗೂ ಮೋಹನ್ ಪಿ.ಎಸ್ ಮೊದಲಾದವರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ