www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕವಿ, ಸಾಹಿತಿ ಚಂದ್ರಶೇಖರ ಪಾತೂರು ಅವರ ಅಂಕಣ ಬರಹಗಳ ಸಂಕಲನ ಬದುಕಿನ ಬೆಲೆಯನೇನಾದರೂ ಬಲ್ಲಿರಾ ಪುಸ್ತಕವನ್ನು ಭಾನುವಾರ ಸಂಜೆ ಬಂಟ್ವಾಳ ಪ್ರವಾಸಿ ಮಂದಿರ ಬಳಿ ಇರುವ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು.
ಸಮುದಾಯದ ಎಲ್ಲ ಸ್ತರದ ಜನರೊಂದಿಗೆ ಬೆರೆಯುವ ಚಂದ್ರಶೇಖರ ಪಾತೂರು ಅವರು ಬರೆದಿರುವ ವಿಚಾರಗಳು ಮತ್ತು ಪುಸ್ತಕದ ಆಶಯವನ್ನು ಓದುಗರು ಅರ್ಥಮಾಡಿಕೊಳ್ಳಲಿ ಎಂದು ಸಚಿವರು ಈ ಸಂದರ್ಭ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ, ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಬದುಕಿನ ಬೆಲೆಯ ಹುಡುಕಾಟವನ್ನು ಪುಸ್ತಕ ಅನಾವರಣಗೊಳಿಸಿದೆ ಎಂದರು. ಮದುವೆ ಮನೆಯಲ್ಲಿ ಕೈತೊಳೆಯದೆ ಬಟ್ಟಲೆತ್ತಿಕೊಂಡು ಊಟ ಮಾಡುವ ವಿಚಾರ, ಕುರುವೆ ವ್ಯಾಪಾರ, ಮನೆಯಲ್ಲಿ ಊಟಕ್ಕೆ ಕಾಯುವ ಪತ್ನಿ ಹೀಗೆ ದೈನಂದಿನ ಬದುಕಿನಲ್ಲಿ ನಾವು ನಿರ್ಲಕ್ಷ್ಯ ಮಾಡುವ ವಿಚಾರಗಳು ಪುಸ್ತಕದಲ್ಲಿ ಅಡಕಗೊಂಡಿವೆ. ಗ್ರಾಮೀಣ ಭಾಗದಲ್ಲಿ ಈಗಲೂ ಸಂಬಂಧಗಳು ಗಟ್ಟಿಯಾಗಿ ಬೆಸೆದುಕೊಂಡಿವೆ ಆದರೆ ಅವು ನೆಲೆತಪ್ಪಿದಲ್ಲಿ ಗ್ರಾಮದ ಬದುಕೂ ಆತಂಕದ ಸ್ಥಿತಿಗೆ ಬರಬಲ್ಲದು ಎಂದು ಹೇಳಿದರು.
ಚಿತ್ತಾರ ಬಳಗದ ಸಂಚಾಲಕ ಸತೀಶ್ ಇರಾ ಉಪಸ್ಥಿತರಿದ್ದರು. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಕಲ್ಲೂರು ನಾಗೇಶ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಲೇಖಕ ಚಂದ್ರಶೇಖರ ಪಾತೂರು ವಂದಿಸಿದರು. ಉಪನ್ಯಾಸಕ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ಮತ್ತು ಚಿತ್ತಾರ ಬಳಗದ ವತಿಯಿಂದ ಕಾರ್ಯಕ್ರಮ ನಡೆಯಿತು.