ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತಟದ ಪುಣ್ಯಭೂಮಿ ನರಿಕೊಂಬು ಗ್ರಾಮ ಏರಮಲೆ ಶಿಖರದ ಮೇಲೆ ಇರುವ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಫೆ. 24, 25, 26 ರಂದು ಬ್ರಹ್ಮಕಲಶೋತ್ಸವ ಮೂರು ದಿನಗಳ ಕಾಲ ಧಾರ್ಮಿಕ ವೈದಿಕ ಸಾಂಸ್ಕೃತಿಕ ವೈವಿಧ್ಯದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಯನ್.ಪ್ರಕಾಶ ಕಾರಂತ ಹೇಳಿದರು.
ಅವರು ಬಿ.ಸಿ.ರೋಡ್ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಫೆ. 24ದು ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನರಿಕೊಂಬು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂದ ದೇವಸ್ಥಾನ ವಠಾರದಿಂದ ಬೆಳಗ್ಗೆ 11 ಗಂಟೆಗೆ ಹೊರಡಲಿದೆ. ದಾನಿಗಳಾದ ಕೆ.ಸೇಸಪ್ಪ ಕೋಟ್ಯಾನ್ ಮೆರವಣಿಗೆಗೆ ಚಾಲನೆ ನೀಡುವರು. ಮಧ್ಯಾಹ್ನ 12.30ಕ್ಕೆ ಮೆರವಣಿಗೆ ಕ್ಷೇತ್ರಕ್ಕೆ ತಲುಪಿದ ಬಳಿಕ ಉಗ್ರಾಣ ಮುಹೂರ್ತ ನಡೆಸುವರು.
ಮೆರವಣಿಗೆಯೊಂದಿಗೆ ಕ್ಷೇತ್ರದ ದೇವರಾದ ಭದ್ರಕಾಳಿಯ ಮೂರ್ತಿಯು ಪುಷ್ಪಾಲಂಕಾರ ಸಹಿತ ಮಂತ್ರೋಚ್ಚಾರ ವೇದಘೋಷ ಸಹಿತ ಬಿರುದಾವಳಿಯೊಂದಿಗೆ ಕ್ಷೇತ್ರ ಪುರಪ್ರವೇಶ ಮಾಡಲಿದೆ. ಪುರಪ್ರವೇಶದ ಬಳಿಕ ಮದ್ಯಾಹ್ನ ಅನ್ನ ಸಂತರ್ಪಣೆ, ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ವೈವಿಧ್ಯ ಹಮ್ಮಿಕೊಂಡಿದೆ.
ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಮೊಗರ್ನಾಡು ಶ್ರೀ ಲಕ್ಷಿ ನರಸಿಂಹ ದೇವಸ್ಥಾನದ ಮೊಕ್ತೇಸರ ವೇ|ಮೂ| ಜನಾರ್ದನ ವಾಸುದೇವ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಸಪಲ್ಯ ಅಧ್ಯಕ್ಷತೆ ವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ತುಳು ಚಲನ ಚಿತ್ರ ಪ್ರದರ್ಶನ ನಡೆಯುವುದು.
ಫೆ. 25ರಂದು ಬೆಳಗ್ಗೆ 6.50ರ ಕುಂಭ ಲಗ್ನದಲ್ಲಿ ಶ್ರೀ ಕಾಡೆದಿ ಭದ್ರಕಾಳಿ ದೇವಿಯ ಮೂರ್ತಿ ಪ್ರತಿಷ್ಠೆ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಧಾರ್ಮಿಕ ವಿಽಗಳು ಬ್ರಹ್ಮಜ್ಞ ಶ್ರೀ ಪಟ್ಲಕೆರೆ ನಾರಾಯಣ ಶಾಂತಿ ಮುಂದಾಳ್ತನದಲ್ಲಿ , ನಾಟಿ ಕೇಶವ ಶಾಂತಿ ಪೌರೋಹಿತ್ಯದಲ್ಲಿ ನಡೆಯುವುದು.
ಫೆ. 25 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಗೌರವ ಅಧ್ಯಕ್ಷ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಯನ್.ಪ್ರಕಾಶ ಕಾರಂತರು ಸಭಾಧ್ಯಕ್ಷತೆ ವಹಿಸುವರು.
ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಉದ್ಘಾಟಿಸುವರು. ಕರ್ನಾಟಕ ಸರಕಾರದ ವಿಧಾನಸಭಾ ವಿರೋಧ ಪಕ್ಷದ ನಾಯಕರ ವಿಶೇಷ ಕರ್ತವ್ಯ ಅಽಕಾರಿ ಜಗನ್ನಾಥ ಬಂಗೇರ ನಿರ್ಮಾಲ್ ಸಭಾಧ್ಯಕ್ಷತೆ ವಹಿಸುವರು. ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ವೈವಿಧ್ಯ, ತುಳು ಚಲನ ಚಿತ್ರ ಪ್ರದರ್ಶನ ನಡೆಯುವುದು.
ಫೆ.26ರಂದು ಮುಂಜಾನೆಯಿಂದ ವಿವಿಧ ವೈದಿಕ ವಿಽಗಳು ನಡೆಯುವುದು. ಅಪರಾಹ್ನ ೩ರಿಂದ ನಡೆಯುವ ಧಾರ್ಮಿಕ ಸಭೆಯನ್ನು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸುವರು. ಕ್ಷೇತ್ರದ ಪ್ರಧಾನ ಪುರೋಹಿತ ನಾಟಿ ಕೇಶವ ಶಾಂತಿ ಸಭಾಧ್ಯಕ್ಷತೆ ವಹಿಸುವರು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ತುಳು ಚಲನ ಚಿತ್ರ ಪ್ರದರ್ಶನ ನಡೆಯುವುದು.
ಕ್ಷೇತ್ರದ ಪರಿಚಯ
ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ಬಂಟ್ವಾಳ ನಗರ ಕೇಂದ್ರ ಬಿ.ಸಿ.ರೋಡಿನಿಂದ ನಾಲ್ಕುವರೆ ಕಿ.ಮೀ. ದೂರದಲ್ಲಿದೆ. ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 1200 ಅಡಿಗಳ ಎತ್ತರದ ಶಿಖರದಲ್ಲಿದೆ. ಸುತ್ತಲೂ ನೇತ್ರಾವತಿ ನದಿ ಹರಿಯುವ ಸುಂದರ ದ್ರಶ್ಯ ಕಾಣುತ್ತದೆ. ದೂರದ ಮೂಡಬಿದಿರೆಯ ಕೊಡಂಜೆಕಲ್ಲು, ಬೆಳ್ತಂಗಡಿಯ ಗಡಾಯಿಕಲ್ಲು, ಕಾರಿಂಜೇಶ್ವರ ಕ್ಷೇತ್ರ, ಮಂಗಳೂರು ಕೊಣಾಜೆ ಇನೋಸಿಸ್, ನರಹರಿ ಪರ್ವತ ಬರೀ ಕಣ್ಣಿಗೆ ಸ್ಪಷ್ಟವಾಗಿ ಇಲ್ಲಿಗೆ ಕಾಣುತ್ತದೆ.
ಕ್ಷೇತ್ರದ ಇರುವಿಕೆ ಬಗ್ಗೆ 2009ರಲ್ಲಿ ಪ್ರಶ್ನಾ ಚಿಂತನೆ ಪ್ರಕಾರ ಗೋಚರಕ್ಕೆ ಬಂತು. ಇಲ್ಲಿನ ಸ್ಥಳವು ಪ್ರಾಕೃತಿಕ ಸೌಂಧರ್ಯ, ದೈವೀ ಸ್ಪಂದನದಿಂದ ಕೂಡಿದ ಅನುಭವ ನೀಡುತ್ತಿದ್ದು, ಅಲ್ಲಿನ ಮಣ್ಣು ರಸೌಷಽಯ ಪರಿಮಳವನ್ನು ಸೂಸುವಂತಿತ್ತು. ಅದರಿಂದಾಗಿ ಇಂದಿಗೂ ಇಲ್ಲಿನ ಪ್ರಸಾದವು ಮೃತ್ತಿಕಾ ಪ್ರಸಾದ ಎಂಬ ಹೆಸರಿನಿಂದ ಇಲ್ಲಿನ ನುಣುಪು ಮಣ್ಣನ್ನು ನೀಡಲಾಗುತ್ತಿದೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಸೇವಾ ಟ್ರಸ್ಟ್ ರಚಿಸಿಕೊಂಡು ಮುಂದಡಿ ಇಡಲಾಗಿತ್ತು. 2016 ಬಳಿಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಚ್ಚಿನ ವೇಗವನ್ನು ನೀಡುವ ಮೂಲಕ ಎರಡು ವರ್ಷಗಳಲ್ಲಿ ಬ್ರಹಕಲಶೋತ್ಸವಕ್ಕೆ ವ್ಯವಸ್ಥೆಯು ಸಜ್ಜಾಗಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಸಪಲ್ಯ , ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ಸೇವಾ ಸಮಿತಿ ಅಧ್ಯಕ್ಷ ಕೇಶವ ಶಾಂತಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ, ಕಾರ್ಯಾಧ್ಯಕ್ಷ ರಾಜಾ ಬಂಟ್ವಾಳ ಉಪಸ್ಥಿತರಿದ್ದರು.