ಮುಸ್ಲಿಂ ಸಮಾಜ ಬಂಟ್ವಾಳ (ಎಂಎಸ್‌ಬಿ) ಸಂಘಟನೆಯ ವತಿಯಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ಐಕ್ಯರಾಗೋಣ ಎಂಬ ಘೋಷಣೆಯೊಂದಿಗೆ “ಬೃಹತ್ ಸಹೋದರತ್ವ ಸಮಾವೇಶ” ಫೆ. 23ರಂದು ಸಂಜೆ 4.30ಕ್ಕೆ ಬಿ.ಸಿ.ರೋಡ್‌ನ ಕೈಕಂಬ ಬಳಿಯ ಎ.ಕೆ.ಮೈದಾನದ ಮಿತ್ತಬೈಲ್ ಅಬ್ದುಲ್ಲಾ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಎಂದು ಎಂಎಸ್‌ಬಿ ಅಧ್ಯಕ್ಷ ಇಬುನ್ ಅಬ್ಬಾಸ್ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಸ್‌ಬಿ ಗೌರವಾಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದು,ಎಂಎಸ್‌ಬಿ ಅಧ್ಯಕ್ಷ ಇಬುನ್ ಅಬ್ಬಾಸ್ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ, ಎಸ್ಸೆಸ್ಸೆಫ್‌ನ ಮಾಜಿ ಜಿಲ್ಲಾಧ್ಯಕ್ಷ ಯಾಕೂಬ್ ಸಅದಿ, ಎಸ್ಕೆಎಸ್ಸೆಸ್ಸೆಫ್‌ನ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಪಿಎಫ್‌ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹಾಗೂ ಮತ್ತಿತರರ ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಹಾಗೂ ಉದ್ಯಮಿ ಡಾ.ಬಿ.ಎ.ಅಹ್ಮದ್ ಹಾಜಿ ಮೊಯ್ದೀನ್ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಅಲ್ಲದೆ, ಸಾಹಿತಿ ಮುಹಮ್ಮದ್ ಬಡ್ಡೂರು ಅವರ ಅಧ್ಯಕ್ಷತೆಯಲ್ಲಿ”ಕವಿಗೋಷ್ಠಿ” ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಎಂಎಸ್‌ಬಿ ಉಪಾಧ್ಯಕ್ಷ ಕೆ.ಎಚ್.ಅಬೂಬಕರ್ ಮಾತನಾಡಿ, ಈ ಸಮಾವೇಶವೂ ಯಾವುದೇ ರಾಜಕೀಯ ಪ್ರೇರಿತವಲ್ಲ. ಮುಸ್ಲಿಮರ ಐಕ್ಯತೆಯನ್ನು ಪ್ರತಿಬಿಂಬಿಸುವ ಸಮಾವೇಶವಾಗಿದೆ. ಇದರಲ್ಲಿ ಮುಸ್ಲಿಂ ಸಮುದಾಯ ಎಲ್ಲ ಸಂಘಟನೆಗಳ ನಾಯಕರು ಭಾಗವಹಿಸುವರು. ಮುಸ್ಲಿಂ ಸಮುದಾಯ ಐಕ್ಯತೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕಳೆದ ಮೂರು ತಿಂಗಳ ಹಿಂದೆ ಈ ಸಂಘಟನೆ ರೂಪುಗೊಂಡಿದೆ ಎಂದು ಹೇಳಿದರು.
ಎಂಎಸ್‌ಬಿ ಪ್ರಧಾನ ಕಾರ್ಯದರ್ಶಿ ಲುಕ್ಮಾನ್ ಮಾತನಾಡಿ, ಮುಸ್ಲಿಮರ ಧ್ವನಿಯನ್ನು ಅಡಗಿಸುವ ವ್ಯವಸ್ಥೆಗಳು ತಾಲೂಕು ಹಾಗೂ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ಇದರ ಬಗ್ಗೆ ಪ್ರಶ್ನಿಸಲು ಮತ್ತು ಕಾನೂನು ರೀತಿಯ ಹೋರಾಟ ಮಾಡಲು ಜಾತ್ಯತೀತ ನೇತಾರರು ಹಾಗೂ ಧಾರ್ಮಿಕ ಮುಖಂಡರನ್ನು ಒಂದೇ ವೇದಿಕೆಯಯಲ್ಲಿ ತರುವ ಪ್ರಯತ್ನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಸ್‌ಬಿನ ಪದಾಧಿಕಾರಿಗಳಾದ ಮುಹಮ್ಮದ್ ವಳವೂರು, ಪಿ.ಎ.ರಹೀಂ, ಮುಹಮ್ಮದ್ ಕಲ್ಲಡ್ಕ, ಹಾಜಿ ಹಸನಬ್ಬ, ಎಸ್.ಎಚ್.ಶಾಹುಲ್, ಎಸ್.ಪಿ.ಶಾಹುಲ್, ಅಕ್ಬರ್ ಅಲಿ ಪೊನ್ನೋಡಿ, ಯೂಸುಫ್ ಆಲಡ್ಕ, ಪುರಸಭಾ ಸದಸ್ಯ ಮೂನೀಶ್ ಅಲಿ ಮತ್ತಿತರರು ಉಪಸ್ಥಿತರಿದ್ದರು.