ಬಂಟ್ವಾಳ

ಬಂಟ್ವಾಳದಲ್ಲಿ ಚುನಾವಣಾ ಕಾವೇರಿಸಿದ ಅಮಿತ್ ಶಾ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂಟ್ವಾಳಕ್ಕೆ ಮಂಗಳವಾರ ಬಂದು ತೆರಳಿದ್ದಾರೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದರೆ, ಒಟ್ಟಾರೆಯಾಗಿ ಚುನಾವಣಾ ಕಾವೇರಿದೆ. ಶತಾಯಗತಾಯ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಬಿಜೆಪಿಗೆ ಬಂಟ್ವಾಳ ಸವಾಲಿನ ಕ್ಷೇತ್ರ. ಕಾಂಗ್ರೆಸ್ ನ ಪ್ರಬಲ ರಾಜಕಾರಣಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಎದುರು  ಪ್ರಬಲ ಸ್ಪರ್ಧೆಯೂ ಇರುವ ಕಾರಣ ರಾಷ್ಟ್ರಾಧ್ಯಕ್ಷರ ಭೇಟಿ ಕಾರ್ಯಕರ್ತರೊಂದಿಗೆ ಮಾತುಕತೆ ಪಕ್ಷಕ್ಕೆ ನೆರವಾಗಲಿದೆ ಎಂಬ ನಂಬಿಕೆ ಬಿಜೆಪಿಯದ್ದು.

ಚಿತ್ರ: ಕಿಶೋರ್ ಪೆರಾಜೆ

ವೇದಿಕೆಗೆ ತೆರಳುವ ಮೊದಲು ಶಾ, ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಮತ್ತು ತಾಯಿ ನಳಿನಿ ಹಾಗೂ ಸಹೋದರಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭ ತನಿಯಪ್ಪ ಮಡಿವಾಳ ಅವರು ಶಾ ಅವರಿಗೆ ಶರತ್ ಹತ್ಯೆ, ತದನಂತರ ನಡೆದ ಬೆಳವಣಿಗೆಯನ್ನು ವಿವರಿಸಿದರು. ಈ ಸಂದರ್ಭ ಬಿಜೆಪಿ ಸ್ಥಳೀಯ ಪ್ರಮುಖ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮೊದಲಾದವರು ಇದ್ದರು.

ಚಿತ್ರ: ಕಿಶೋರ್ ಪೆರಾಜೆ

ಬಳಿಕ ವೇದಿಕೆಯೇರಿ ಭಾಷಣ ಮಾಡಿದ ಶಾ ಅವರ ಮಾತುಗಳನ್ನು ಹಿರಿಯ ನಾಯಕ ಬಂಗಾರಡ್ಕ ವಿಶ್ವೇಶ್ವರ ಭಟ್ ಕನ್ನಡಕ್ಕೆ ಅನುವಾದಿಸಿದರು.

ಇದಕ್ಕೂ ಮೊದಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲಿಸುವ ಹೊಣೆ ಕಾರ್ಯಕರ್ತರ ಮೇಲಿದೆ ಎಂದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮಾತನಾಡಿ ಪಕ್ಷ ಗೆಲ್ಲಿಸುವಂತೆ ಕರೆ ನೀಡಿದರು. ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಂತೋಷ್ ಜೀ, ಸಂಸದ ನಳಿನ್ ಕುಮಾರ್ ಕಟೀಲ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಎಂ.ಎಲ್.ಸಿ., ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಸಂಚಾಲಕ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಸುದರ್ಶನ ಎಂ, ಉಮಾನಾಥ ಕೋಟ್ಯಾನ್, ಕ್ಯಾ.ಬ್ರಿಜೇಶ್ ಚೌಟ, ಬೆಳ್ತಂಗಡಿ ಅಧ್ಯಕ್ಷ ರಂಜನ್ ಜಿ.ಗೌಡ, ಬಂಟ್ವಾಳ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪುತ್ತೂರು ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ನಗರಾಧ್ಯಕ್ಷ ಜೀವಂಧರ ಜೈನ್ ಉಪಸ್ಥಿತರಿದ್ದರು.

ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಕ್ಷೇತ್ರಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು. ಹಿರಿಯ ನಾಯಕ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಶಾ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು.

ಅಮಿತ್ ಶಾ ಏನಂದರು? ಇಲ್ಲಿದೆ ಹೈಲೈಟ್ಸ್…

  • ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತುಷ್ಟೀಕರಣದ ರಾಜನೀತಿ ಅನುಸರಿಸುತ್ತಿದೆ
  • ಆರೆಸ್ಸೆಸ್ ಸಹಿತ ರಾಷ್ಟ್ರೀಯವಾದಿ ಚಿಂತನೆಯ ೨೦ಕ್ಕೂ ಅಧಿಕ ಕಾರ್ಯಕರ್ತರ ಹತ್ಯೆ ನಡೆದಿದೆ.
  • ಸಿದ್ದರಾಮಯ್ಯ ಸರ್ಕಾರದಿಂದ ಅವರನ್ನು ಹಿಡಿಯುವುದು ಸಾಧ್ಯವಿಲ್ಲ ಎಂಬಂತಾಗಿದೆ. ಅವರು ಪಾತಾಳದಲ್ಲಿ ಅಡಗಿದ್ದರೂ ಮುಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸೆರೆಹಿಡಿಯುತ್ತದೆ. ಇದು ಪಕ್ಷದ ಅಧ್ಯಕ್ಷನಾಗಿ ನನ್ನ ಆಶ್ವಾಸನೆ
  • ಕರಪ್ಶನ್ ನ ಟ್ರಾನ್ಸ್‌ಲೇಶನ್ ಭ್ರಷ್ಟಾಚಾರ. ಈಗ ಅದರ ಬದಲು ಸಿದ್ದರಾಮಯ್ಯ ಸರಕಾರ ಎಂದಾಗಿದೆ.
  • ಅಭ್ಯರ್ಥಿ ಯಾರು ಎಂಬುದನ್ನು ನೋಡುವುದು ಬೇಡ, ಕಮಲದ ಚಿಹ್ನೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಚುನಾವಣೆ ಕಡೆಗೆ ದೃಷ್ಟಿ ಹರಿಸಿ, ನಿಮ್ಮ ಬೂತ್ ನಲ್ಲಿ ಕೆಲಸ ಮಾಡಿದರೆ ವಿಧಾನಸಭೆ ಗೆಲ್ಲುತ್ತೇವೆ.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.