www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸದೃಢ, ಸುಶಿಕ್ಷಿತ, ಸುಸಂಸ್ಕೃತ ಸಮಾಜಕ್ಕೆ ಸಂಕಲ್ಪ ಕೈಗೊಳ್ಳಬೇಕು. ತಾರತಮ್ಯರಹಿತ ಬದುಕು ನಿರ್ಮಾಣವಾಗಬೇಕಿದ್ದರೆ ಧರ್ಮದೊಳಗೆ ರಾಜಕೀಯ ನುಸುಳಬಾರದು, ಜಾತಿ ಆಧರಿತವಾಗಿ ವೈಷಮ್ಯ ಕೂಡದು ಎಂದು ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂನ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳದಲ್ಲಿ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಶ್ರೀರಾಮಕ್ಷೇತ್ರ ಸೇವಾ ಸಮಿತಿ ಬಂಟ್ವಾಳ ತಾಲೂಕು ಸಮತಿ ಆಶ್ರಯದಲ್ಲಿ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಮತ್ತು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಅವರು, ಶ್ರೀರಾಮಚಂದ್ರನಿಗೆ ಎಲ್ಲರೂ ಒಂದೇ ಇಂದು ನಾಯಕರು, ರಾಜಕಾರಣಿಗಳು, ಸರಕಾರಗಳ ವಿರುದ್ಧ ಅಪಪ್ರಚಾರ ಮಾಡುವವರು, ಜಾತಿ, ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಕಾಣುತ್ತದೆ. ದಂಡಸಂಹಿತೆ ಇಲ್ಲಿ ದುರ್ಬಲವಾಗಿದೆ. ಜನರಿಗೆ ಶಿಕ್ಷೆಯ ಭಯವಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಂಗದಲ್ಲಿ ನುರಿತವರು, ಮಠಾಧೀಶರು ಒಗ್ಗಟ್ಟಾಗಿ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದರು.
ಹಿಂಸೆ ಪ್ರಚೋದನೆ ಸಲ್ಲದು: ರೈ
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮನುಷ್ಯನ ನಡುವೆ ಅಪನಂಬಿಕೆ ಜಾಸ್ತಿ ಇರುವ ಸಂದರ್ಭ ಪೀಠಾಧಿಪತಿಗಳ ಪಾತ್ರ ಮಹತ್ವದ್ದಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಪೀಠಾಧಿಪತಿಗಳು ನೆರವಾಗಬೇಕು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹಿಂಸಿಸುವುದು ಹತ್ಯೆ ಮಾಡುವುದು ಹಾಗೂ ಅಂಥವರನ್ನು ಪ್ರಚೋದಿಸುವುದೂ ಸಲ್ಲದು ಎಂದರು. ವೇದಿಕೆಯಲ್ಲಿ ನಿಂತು ಮಾತನಾಡುವವರಿಗೆ ಕೊರತೆ ಇಲ್ಲ ಆದರೆ ಅದನ್ನು ಪಾಲನೆ ಮಾಡುವುದು ಮುಖ್ಯ, ಪರಧರ್ಮ ಸಹಿಷ್ಣುತೆಯನ್ನು ಸೈದ್ಧಾಂತಿಕ ನಿಲುವನ್ನು ಹಿಂದು ಧರ್ಮ ನೀಡಿದೆ ಎಂದ ರೈ, ನನ್ನ ಹೆಸರಲ್ಲೇ ರಾಮ ಇದ್ದಾನೆ. ನನಗೆ ಶ್ರೀರಾಮನ ಅನುಗ್ರಹ ಇದೆ. ಅಪಪ್ರಚಾರಗಳು ಇಂದು ಜಾಸ್ತಿಯಾಗುತ್ತಿವೆ. ಸುಳ್ಳು ಜ್ವಾಲಾಮುಖಿಯಂತೆ, ಸತ್ಯ ನಿಧಾನವಾಗಿ ಹರಡುತ್ತದೆ. ಯಾವುದೇ ಸಂದರ್ಭವೂ ತಾನು ಸುಳ್ಳು ಹೇಳಿಲ್ಲ. ಭೂಮಸೂದೆಯಲ್ಲಿ ಅತಿ ಹೆಚ್ಚು ಲಾಭ ಪಡೆದವರು ಹಿಂದುಳಿದ ವರ್ಗದ ಹಿಂದೂ ಸಮಾಜ. ಇತಿಹಾಸದ ಅರಿವು ಇಂದು ಅಗತ್ಯ ಎಂದರು.
ಎಲ್ಲರಿಗೂ ಆಸರೆ ನೀಡಿದ ಧರ್ಮ: ನಳಿನ್
ಮುಖ್ಯ ಅತಿಥಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹಿಂದು ಧರ್ಮ ಜಗತ್ತಿನ ಎಲ್ಲ ಮತಧರ್ಮಗಳಿಗೂ ಆಸರೆ ನೀಡಿದೆ. ಹಿಂದು ಧರ್ಮದ ಪರ ಮಾತನಾಡುವ ನನ್ನನ್ನು ಕೋಮವಾದಿ ಎಂದರೆ ದು:ಖವಿಲ್ಲ. ಆಧ್ಯಾತ್ಮ ಚಿಂತನೆಯನ್ನು ಜಗತ್ತಿಗೆ ಪರಿಚಯಿಸಿದ ಭಾರತದ ಮಣ್ಣಿನಲ್ಲಿ ಗುರುಪೀಠ ಶ್ರೇಷ್ಠ, ಸಮಾಜದ ಕಣ್ಣು ತೆರೆಸಿದ ಕ್ರಾಂತಿಪುರುಷ ಬ್ರಹ್ಮಶ್ರೀ ನಾರಾಯಣಗುರು. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅವರು ಹಾಕಿದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಎಲ್ಲ ಸಮಾಜಕ್ಕೂ ವೇದಗಳನ್ನು ಕಲಿಸುವ ಮಠ ಕನ್ಯಾಡಿ. ಅಯೋಧ್ಯೆ ಮತ್ತು ದಕ್ಷಿಣ ಭಾರತವನ್ನು ಸೇರಿಸುವ ಕೆಲಸವನ್ನು ಕನ್ಯಾಡಿ ಮಠ ಮಾಡುತ್ತದೆ ಎಂದರು.
ಅಧ್ಯಕ್ಷತೆಯನ್ನು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ನಾನಾ ಜಾತಿ ಸಂಘಟನೆಗಳ ಅಧ್ಯಕ್ಷರಾದ ಬೃಜೇಶ್ ಜೈನ್ ಬಾಳ್ತಿಲಬೀಡು, ಸುರೇಶ್ ನಾಯಕ್, ಲಿಂಗಪ್ಪ ಗೌಡ ಅಳಿಕೆ, ಸುಧಾಕರ ಆಚಾರ್ಯ, ಪದ್ಮನಾಭ ದೇವಾಡಿಗ, ರಘು ಸಫಲ್ಯ, ಸುರೇಶ್ ನಂದೊಟ್ಟು, ಎನ್.ಕೆ.ಶಿವ, ಕೇಶವ ನಾಯ್ಕ್, ಚಂದಪ್ಪ, ಲೋಕೇಶ್ ಸುವರ್ಣ, ದಿವಾಕರ ಭಂಡಾರಿ, ಪವಿತ್ರ ಕುಮಾರ್ ಗಟ್ಟಿ, ಭಟ್ಕಳ ಶ್ರೀರಾಮ ಸೇವಾ ಸಮಿತಿಯ ಬಾಬು ಮಾಸ್ಟರ್, ಶ್ರೀ.ಧ.ಗ್ರಾ.ಯೋ. ಯೋಜನಾಧಿಕಾರಿ ಸುನೀತಾ ನಾಯಕ್, ಜಯಂತಿ, ಜಯಶ್ರೀ ಕರ್ಕೇರ, ಶ್ರೀರಾಮ ಸೇವಾ ಸಮಿತಿ ಗೌರವಾಧ್ಯಕ್ಷ ಎ.ರುಕ್ಮಯ ಪೂಜಾರಿ, ತಾಲೂಕು ಸಂಚಾಲಕ ಬಿ.ಮೋಹನ್, ಜತೆ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಕೋಶಾಧಿಕಾರಿ ರಾಜೇಶ್ ಬಾಳೆಕಲ್ಲು, ಸ್ವಾಗತ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸಹಸಂಚಾಲಕ ಬಿ.ವಿಶ್ವನಾಥ, ಲೋಕೇಶ್ ಕೆ, ಚರಣ್ ಬಡಕಬೈಲು, ಗಣೇಶ್,ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು. ಸೀತಾರಾಮ ಕಲ್ಯಾಣೋತ್ಸವ ಸಂದರ್ಭ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಸಹಿತ ಗಣ್ಯರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲಿಯಾನ್ ನರಿಕೊಂಬು ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಟಿ.ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿ ಸಂಚಾಲಕ ಬೇಬಿ ಕುಂದರ್ ಮಠದ ಕಾರ್ಯಯೋಜನೆ ಕುರಿತು ತಿಳಿಸಿದರು. ಪುರಸಭಾ ಸಮಿತಿ ಸಂಚಾಲಕ ರಾಮದಾಸ ಬಂಟ್ವಾಳ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.