ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಟ್ವೇಕಾಂಡೋ ಕ್ರೀಡಾಕೂಟದಲ್ಲಿ 2 ಚಿನ್ನದ ಪದಕ ಪಡೆದ ಬಂಟ್ವಾಳ ತೌಹೀದ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿಧ್ಯಾರ್ಥಿ ರೈಫಾನ್ ಅಹಮದ್ ಗೆ ಬಿ.ಸಿ. ರೋಡ್ ಶಾಂತಿಅಂಗಡಿಯಲ್ಲಿ ಸನ್ಮಾನಿಸಲಾಯಿತು.
ಟೈಗರ್ ಫ್ರೆಂಡ್ಸ್ ಇಲೆವನ್ ಹಾಗೂ ಕಟ್ಟೆ ಫ್ರೆಂಡ್ಸ್ ಶಾಂತಿಅಂಗಡಿ ವತಿಯಿಂದ ಸಮಾರಂಭ ಏರ್ಪಡಿಸಲಾಗಿತ್ತು. ಬಂಟ್ವಾಳ ಪುರಸಭಾ ಸದಸ್ಯ ಶರೀಫ್, ಕಟ್ಟೆ ಫ್ರೆಂಡ್ಸ್ ಕಪ್ತಾನ ಮಜ್ಜಿ ಪಳ್ಳ, ಟೈಗರ್ ಇಲೆವನ್ ಕಪ್ತಾನ ಹಬೀಬ್ ಚಾಂದ್ ಮತ್ತಿತರರು ಉಪಸ್ಥಿತರಿದ್ದರು.
ಶಾಂತಿಅಂಗಡಿ ಊರಿನ ಬಾಲಕ ರೈಫಾನ್ ರಾಜ್ಯಮಟ್ಟದಲ್ಲಿ 2 ಚಿನ್ನದ ಪದಕ ಗಳಿಸುವ ಮೂಲಕ ಊರಿಗೆ ಕೀರ್ತಿ ತಂದಿದ್ದಾನೆ. ಇವನ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಮುಖ್ಯ ಅತಿಥಿಯಾಗಿದ್ದ ಪುರಸಭಾ ಸದಸ್ಯ ಶರೀಫ್ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ನೆನಪಿನ ಫಲಕ, ನಗದು ನೀಡಿ ಸನ್ಮಾನಿಸಲಾಯಿತು.
ಜನವರಿಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಒಲಿಂಪಿಕ್ ಮಾರ್ಷಲ್ ಆರ್ಟ್ ಟ್ವೇಕಾಂಡೋ ಕ್ರೀಡೆಯಲ್ಲಿ 36 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ರೈಫಾನ್, ಅತ್ಯುತ್ತಮ ಪ್ರದರ್ಶನ ನೀಡಿ ಎರಡು ಚಿನ್ನದ ಪದಕ ಗಳಿಸಿದ್ದಾನೆ.
ಬಿ.ಸಿ. ರೋಡ್ ಕೈಕಂಬ (ಕೆ.ಎಸ್.ಆರ್.ಟಿ.ಸಿ. ಡಿಪೋ ಸಮೀಪದ) ನಿವಾಸಿಗಳಾಗಿರುವ ಮುಹಮ್ಮದ್ ರಫೀಕ್ ಮತ್ತು ಫಾತಿಮಾ ಜೊಹರಾ ದಂಪತಿಯ ಪುತ್ರನಾಗಿರುವ ರೈಫಾನ್ ಅಹಮದ್, ದ.ಕ. ಜಿಲ್ಲಾ ಟ್ವೇಕಾಂಡೋ ಅಸೋಸಿಯೇಶನ್‍ನ ತರಬೇತುದಾರ ಇಸಾಕ್ ನಂದಾವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.