ಮುಂದಿನ ಏಪ್ರಿಲ್ ನಿಂದ ಬಂಟ್ವಾಳ ಪುರಸಭೆ ನಿವಾಸಿಗಳಿಂದ ತ್ಯಾಜ್ಯ ಸಂಗ್ರಹಣೆಯ ಶುಲ್ಕವನ್ನು ಸ್ವಯಂಘೋಷಿತ ಆಸ್ತಿ ತೆರಿಗೆ ಜೊತೆಯಲ್ಲೇ ವಸೂಲು ಮಾಡಲಾಗುವುದು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬೆಂಬಲಿತ ಸದಸ್ಯರಿಬ್ಬರ ಆಕ್ಷೇಪದ ನಡುವೆಯೇ ಇದನ್ನು ಅಂಗೀಕರಿಸಲಾಯಿತು.
ಹೊರಗುತ್ತಿಗೆ ಮೂಲಕ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು,ಈ ಸಂದರ್ಭದಲ್ಲಿ ಮನೆ, ಮನೆಯಿಂದ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿ ಅಸಾಧ್ಯ. ಈ ಹಿಂದೆ 2916ರ ಸೆ.22 ರಂದು ಕೈಗೊಂಡ ನಿರ್ಣಯದಂತೆ ಸ್ವಯಂಘೋಷಿತ ಆಸ್ಥಿ ತೆರಿಗೆಯ ಜೊತೆಯಲ್ಲೆ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಗೆ ಕೌನ್ಸಿಲ್ ಅನುಮತಿ ನೀಡುವಂತೆ ಆರೋಗ್ಯಾಕಾರಿ ರತ್ನಪ್ರಸಾದ್ ಅಂಜೆಂಡಾ ಮೇಲಿನ ಚರ್ಚೆ ವೇಳೆ ಕೋರಿದರು. ಈ ಕುರಿತು ಜಿಲ್ಲಾಕಾರಿ ಕಚೇರಿಯಿಂದ ಹೊರಡಿಸಲಾದ ಸುತ್ತೋಲೆಯನ್ನು ಸಭೆಯ ಮುಂದಿಟ್ಟರು.
ಏನು ಸಮಸ್ಯೆ:
ಘನತ್ಯಾಜ್ಯ ವಿಲೇವಾರಿಗೆ ಸಂಬಂಸಿ 3.11 ಕೋ.ರೂ.ವಿನ ವಿಸ್ತ್ರತ ವರದಿಯನ್ನು ಸಿದ್ದಪಡಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ಕೂಡ ಪಡೆದುಕೊಳ್ಳಲಾಗಿದೆ. ಪಾಲಿಕೆ ಸಹಿತ ಮೂಡಬಿದ್ರೆ ಪುರಸಭೆ,ಪುತ್ತೂರು ನಗರಸಭೆಯಲ್ಲೂ ಇಂತಹ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಭೆಯ ಗಮನಕ್ಕೆ ಆರೋಗ್ಯಾಕಾರಿ ತಂದಾಗ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರಾದ ಗಂಗಾಧರ್ ಮತ್ತು ಬಿ.ಪ್ರವೀಣ್, ತ್ಯಾಜ್ಯ ವಿಲೇವಾರಿಯ ವಾಹನ ಕೆಲ ವಾರ್ಡುಗಳಿಗೆ ಹೋಗುತ್ತಿಲ್ಲ, ನಮ್ಮ ವಾರ್ಡಿಗೂ ವಾಹನ ಬಾರದೆ ವಾರವೇ ಕಳೆಯಿತು ಎಂದರು.
ಸದಸ್ಯೆ ಸಂಜೀವಿ ಮಾತನಾಡಿ, ನನ್ನ ವಾರ್ಡಿಗೂ ತ್ಯಾಜ್ಯ ಸಂಗ್ರಹ ಬರುವುದೇ ಇಲ್ಲ,ಅಲ್ಲಿ ನಾಗರಿಕರು ಕಸ,ತ್ಯಾಜ್ಯವನ್ನು ರಸ್ತೆ ಬದಿ ,ಚರಂಡಿಗೆ ಎಸೆಯುತ್ತಿದ್ದಾರೆ ಎಂದ ದೂರಿದರು. ತ್ಯಾಜ್ಯ ವಿಲೇವಾರಿಗೆ ಸಂಬಂಸಿ ಪುರಸಭೆಗೆ ಈವರೆಗೂ ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲಿ ಶುಲ್ಕ ವಸೂಲಾತಿ ಜನರಿಗೆ ಹೊರೆಯಾಗಲಿದೆ ಎಂದು ಸದಸ್ಯರಾದ ಪ್ರವೀಣ್,ಗಂಗಾಧರ್ ವಾದ ಮಂಡಿಸಿದರು. ಈ ಪ್ರಸ್ತಾಪವನ್ನು ಕೈ ಬಿಡದಿದ್ದರೆ,ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ಸದಸ್ಯ ಪ್ರವೀಣ್ ನೀಡಿದರೆ, ಕಸ ಮಂಗಳೂರಿಗೆ ಸಾಗುತ್ತದೋ, ಕಂಚಿನಡ್ಕಪದವಿಗೆ ಹೋಗುತ್ತದೋ ಎಂದು ಸದಸ್ಯ ದೇವದಾಸ ಶೆಟ್ಟಿ ಪ್ರಶ್ನಿಸಿದರು. ಕೊನೆಗೆ ಸದಸ್ಯ ಪ್ರವೀಣ್ ಆಕ್ಷೇಪವನ್ನು ದಾಖಲಿಸಿಕೊಂಡೇ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲೇ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಗೆ ಸಭೆ ನಿರ್ಧರಿಸಿತು.
ಆರು ಲಿಖಿತ ದೂರು ಕೊಟ್ಟರೂ ಪ್ರಯೋಜನವಿಲ್ಲ:
ಕಳೆದ ಸಾಲಿನ ಬಜೆಟ್ ಲೆಕ್ಕಪತ್ರ ವ್ಯತ್ಯಾಸದ ಕುರಿತು ಬಿಜೆಪಿ ಸದಸ್ಯರ ಆಕ್ಷೇಪ ಈ ಬಾರಿಯೂ ಮುಂದುವರಿಯಿತು.
ಸದಸ್ಯ ಗೋವಿಂದ ಪ್ರಭು ಮಾತನಾಡಿ, ಯೋಜನಾ ನಿರ್ದೇಶಕರಿಗೆ ಆರು ಲಿಖಿತ ದೂರು ನೀಡಿದರೂ ಕನಿಷ್ಠ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ೧೪ ನೇ ಹಣಕಾಸು ಯೋಜನೆಯಲ್ಲಿ ಸದಸ್ಯರಿಗೆ ಗೌರವಧನ,ನೌಕರರಿಗ ಸಂಬಳ ಕೊಡಲು ಅವಕಾಶವಿಲ್ಲದಿದ್ದರೂ ಇಲ್ಲಿ ಬಳಕೆ ಮಾಡಲಾಗಿದೆ ಎಂದು ಸದಸ್ಯ ದೇವದಾಸ ಶೆಟ್ಟಿ ಲೆಕ್ಕಾಕ್ಷಕರ ಗಮನಕ್ಕೆ ತಂದರು. ಕಳೆದ ಒಂದು ವರ್ಷದಿಂದ ಬಜೆಟ್ ನಲ್ಲಾಗಿರುವ ಲೋಪ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಇದೀಗ ೩೩ ಲಕ್ಷ ರೂ.ವಿನಷ್ಟು ವ್ಯತ್ಯಾಸ ಕಂಡು ಬರುತ್ತಿದೆ ಎಂದರು.
ಆಗ ಪ್ರತಿಕ್ರಿಯಿಸಿದ ಮುಖ್ಯಾಕಾರಿ ರೇಖಾ ಶೆಟ್ಟಿ, ಪುರಸಬೆಯಲ್ಲಿ ಅಕೌಂಟೆಂಟ್ ಹುದ್ದೆ ಖಾಲಿ ಇದ್ದು,ಸಿಎ ಕಲಿತಿರುವ ನುರಿತ ಅಕೌಂಟೆಂಟ್ ನಿಯುಕ್ತಗೊಳಿಸಲು ಅನುಮತಿ ಕೇಳಿದರು. ತಕ್ಷಣ ತಾತ್ಕಾಲಿಕ ನೆಲೆಯಲ್ಲಿ ಈ ಹುದ್ದೆ ಭರ್ತಿ ಗೊಳಿಸಲು ನಿರ್ಧರಿಸಲಾಯಿತು.
ಸಿಎಂ ಬಂಟ್ವಾಳಕ್ಕಾಗಮಿಸಿದ ಹಿನ್ನಲೆಯಲ್ಲಿ ಸಚಿವರೊಂದಿಗೆ ಅಕಾರಿಗಳ ಪೂರ್ವಭಾವಿ ಸಭೆಯ ಊಟ,ಉಪಹಾರಕ್ಕೆ ೫೭,೪೬೯ ರೂ.ಖರ್ಚು ಮಾಡಲಾಗಿದೆಯೇ ಎಂದು ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಪುರಸಭಾ ವ್ಯಾಪ್ತಿಯಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಒಂದು ಲಕ್ಷಕ್ಕೂ ಅಕ ಖರ್ಚ ಆಗಿತ್ತು. ಪುರಸಭೆ ೫೭ ಸಾವಿರ ಪಾವತಿಸಿದರೆ,ಉಳಿದ ಹಣ ತಾಲೂಕು ಆಡಳಿತ ನೀಡಿದೆ ಎಂದರು. ಖರ್ಚಿನ ಕುರಿತು ಬಿಲ್ಲು ಸಭೆಗೆ ಹಾಜರುಪಡಿಸುವಂತೆ ಸದಸ್ಯ ಪ್ರಭು ಸೂಚಿಸಿದರು.ಕೊನೆಗೆ ಬಿಲ್ಲು ಪರಿಶೀಲಿಸಿದಾಗ ಪೂರ್ವಭಾವಿ ಸಭೆಗೆ ೯೨೦೦ ರೂ.ಮುಖ್ಯಮಂತ್ರಿಯವರ ಕಾರ್ಯಕ್ರಮಕ್ಕೆ ೧೭ ಸಾ.ರೂ.ವ್ಯಯ ಮಾಡಲಾಗಿದೆ. ಸಿಬಂದಿಗಳ ಎಡವಟ್ಟಿನಿಂದ ಗೊಂದಲವುಂಟಾಗಿದೆ ಎಂದು ಮುಖ್ಯಾಕಾರಿ ಸ್ಪಷ್ಟ ಪಡಿಸಿದರು.
ಕಾಮಗಾರಿಗೆ ಯಾರ ಅನುದಾನ?
ಗೂಡಿನಬಳಿಯಲ್ಲಿ ರಸ್ತೆ ಕಾಮಗಾರಿಯೊಂದಕ್ಕೆ ಕೆಲದಿನಗಳ ಹಿಂದೆ ಸಚಿವರು ಶಿಲಾನ್ಯಾಸ ನೆರವೇರಿಸಲಾಗಿದೆ. ಜಿಪಂಸದಸ್ಯರು, ಪುರಸಭಾಧ್ಯಕ್ಷರು, ಮುಖ್ಯಾಕಾರಿಯವರು ಎಲ್ಲರೂ ಇದ್ದರು. ಆದರೆ ಆದೇ ವಾರ್ಡಿನ ಸದಸ್ಯನಾದ ನನನ್ನು ಆಹ್ವಾನಿಸಿಲ್ಲ ಎಂದು ಸದಸ್ಯ ಇಕ್ಬಾಲ್ ಗೂಡಿನಬಳಿ ಅಸಮಾಧಾನ ವ್ಯಕ್ತಪಡಿಸಿದರು
ಅಭಿವೃದ್ದಿಗೆ ನನ್ನ ಸಹಮತವಿದೆ.ಇದನ್ನು ಯಾವ ಅನುದಾನದಿಂದ ಮಾಡಲಾಗುತ್ತಿದೆ ಎಂಬುದನ್ನಾದರೂ ತಿಳಿಸಿ ಅಥವಾ ಚುನಾವಣೆ ಸಮೀಪಿಸುವುದರಿಂದ ಶಿಲಾನ್ಯಾಸ ಮಾಡಲಾಗಿದೆಯೇ ಎಂದು ಸದಸ್ಯ ಇಕ್ಬಾಲ್ ಸ್ಪಷ್ಟನೆ ಬಯಸಿದರು. ಮುಖ್ಯಾಕಾರಿ ಮತ್ತು ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಅವರಿಬ್ಬರೂ ಹೇಳಿದ ಉತ್ತರಕ್ಕೂ ತಾಳೆಯಾಗದ ಕಾರಣ ಯಾವ ಅನುದಾನದಿಂದ ಎಂದು ಗೊತ್ತಿಲ್ಲದೆ ಕಾಮಗಾರಿ ಹೇಗೆ ಮಾಡಲಾಗುತ್ತಿದೆ ಎಂದು ಗೋವಿಂದ ಪ್ರಭು ಪ್ರಶ್ನಿಸಿರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ವೇದಿಕೆಯಲ್ಲಿದ್ದರು. ಸದಸ್ಯರಾದ ಮಹಮ್ಮದ್ ಶರೀಫ್, ಬಿ.ಪ್ರವೀಣ್, ಜಗದೀಶ್ ಕುಂದರ್,ಬಿ.ಮೋಹನ್, ಮೊನೀಶ್ ಆಲಿ,ಚಂಚಲಾಕ್ಷಿ, ಜಸಿಂತಾ,ಸುಗುಣ ಕಿಣಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.