ಮಿನಿ ವಿಧಾನಸೌಧದಲ್ಲಿರುವ ಕಂದಾಯ ಇಲಾಖೆಯ ಫೈಲುಗಳನ್ನು ಮುಟ್ಟಲು ಯಾರಿಗೆ ಅಧಿಕಾರ ಇದೆ, ಎಲ್ಲರೂ ಬಂದು ನೋಡಬಹುದಾ, ಹಾಗೊಂದು ವ್ಯವಸ್ಥೆ ಇದೆಯಾ, ತಹಶೀಲ್ದಾರ್ ಅವರೇ ನೀವು ಅದನ್ನು ಗಮನಿಸಿದ್ದೀರಾ? ನೀವು ಪ್ರಾಮಾಣಿಕರಾಗಿ ಕೆಲಸ ಮಾಡುತ್ತಿರಬಹುದು ಆದರೆ ಇದು ನಿಮ್ಮ ಅರಿವಿಗೆ ಬಂದಿದೆಯಾ?
ಹೀಗೆಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬುಧವಾರ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ತಾಪಂ ಸಭೆಯಲ್ಲಿ ಪ್ರಶ್ನಿಸಿದರು.
ಮಿನಿ ವಿಧಾನಸೌಧವನ್ನೇನಾದರೂ ಜನಸಾಮಾನ್ಯ ಹೊಕ್ಕರೆ ಅಲ್ಲಿ ಕೆಲಸವಾಗೋದೇ ಇಲ್ಲ, ಅಲ್ಲಿ ಬ್ರೋಕರುಗಳ ಸಾಮ್ರಾಜ್ಯವಿದೆ ಎಂದು ಶೆಟ್ಟಿ ಗಂಭೀರ ಆರೋಪ ಮಾಡಿದರು.
ಕಳೆದ ಹಲವು ಮೀಟಿಂಗ್‌ಗಳಲ್ಲಿ ಈ ವಿಷಯ ಪ್ರಸ್ತಾಪಗೊಂಡಿದ್ದರೂ ಯಾವುದೇ ಚುರುಕುಮುಟ್ಟಿಸುವ ಕೆಲಸ ಆಗಿಲ್ಲ. ಇಲ್ಲಿ ಯಾವುದೇ ರೆಕಾರ್ಡ್ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಕಡತಗಳು ಕಾಣೆಯಾಗುವ ಕುರಿತು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ವ್ಯಕ್ತಿಯೊಬ್ಬರು ಒಂದು ವಿಷಯಕ್ಕೆ ಸಂಬಂಧಿಸಿ ಹಲವಾರು ಬಾರಿ ಅಲೆಯುವಂತೆ ಮಾಡಲಾಗುತ್ತದೆ. ಇಲ್ಲಿ ಬ್ರೋಕರುಗಳು ಫೈಲ್ ನೋಡುತ್ತಾರೆ. ಎಲ್ಲರೂ ಫೈಲುಗಳನ್ನು ತೆಗೆಯುತ್ತಾರೆ. ಸಂಜೆಯ ಬಳಿಕ ಕೆಲಸಗಳು ವೇಗವಾಗಿ ನಡೆಯುತ್ತವೆ ಎಂಬ ಆರೋಪವಿದೆ. ಜವಾಬ್ದಾರಿ ಇಲ್ಲದವರೂ ಕಡತಗಳ ಪರಿಶೀಲನೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇವರೊಂದಿಗೆ ದನಿಗೂಡಿಸಿದ ಆಡಳಿತ ಪಕ್ಷದ ತಾಪಂ ಸದಸ್ಯ ಪ್ರಭಾಕರ ಪ್ರಭು, ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿ, ಮಿನಿವಿಧಾನಸೌಧ ರಚನೆಗೊಂಡರೂ ಅಟಲ್ ಜನಸ್ನೇಹಿ ಕೇಂದ್ರ ಅಲ್ಲಿಗೆ ಶಿಫ್ಟ್ ಆಗಿಲ್ಲವೇಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭ ಗರಂ ಆದ ತಹಶೀಲ್ದಾರ್ ಪುರಂದರ ಹೆಗ್ಡೆ, ನಾನು ತಾಲೂಕಿನ ದಂಡಾಧಿಕಾರಿ ತಹಶೀಲ್ದಾರ್, ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು, 94 ಸಿ ಹಕ್ಕುಪತ್ರವನ್ನು ಒದಗಿಸಲು ಹಗಲಿರುಳೂ ಶ್ರಮಿಸುತ್ತಿದ್ದೇನೆ. ಮೀಟಿಂಗ್ ಗಳಿಗೆ ತೆರಳಿದ ಬಳಿಕ ಸಂಜೆಯ ಬಳಿಕವಷ್ಟೇ ಸಮಯ ಸಿಗುತ್ತದೆ. ದಿನದ ಇಪ್ಪತ್ತನಾಲ್ಕು ತಾಸು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉತ್ತರಿಸಿದರು. ಈ ಸಂದರ್ಭ ಮಾತಿನ ಚಕಮಕಿ ಬೆಳೆದಂತೆ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ನಿಮ್ಮ ಕುರಿತು ಆಕ್ಷೇಪವಲ್ಲ, ನಿಮ್ಮ ಕೈಕೆಳಗಿನ ಸಿಬ್ಬಂದಿಯ ಕುರಿತು ಆರೋಪ ಸಲ್ಲಿಕೆಯಾಗಿದೆ ಎಂದರು. ಆದರೂ ಬ್ರೋಕರ್ ಹಾವಳಿ ಹಾಗೂ ಕಡತ ಕಾಣೆಯ ಕುರಿತು ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ಸುಭಾಶ್ಚಂದ್ರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಉಲ್ಬಣ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾದರೂ ನಮ್ಮ ಕರೋಪಾಡಿ ಗ್ರಾಮದ ಪ್ರದೇಶಗಳಲ್ಲಿ ಕೆಲವೆಡೆ ಕುಡಿಯುವ ನೀರಿಗೆ ಪರದಾಟ ನಿಂತಿಲ್ಲ ಎಂದು ತಾಪಂ ಆಡಳಿತ ಪಕ್ಷದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ದೂರಿದರು.
ಪಿಡಿಒ ಅಮಾನತುಗೊಳಿಸಿ:
ಕರೋಪಾಡಿ ಗ್ರಾಪಂ ಬಯಲು ಶೌಚಮುಕ್ತ ಎಂಬ ಹೆಗ್ಗಳಿಕೆಯಷ್ಟೇ ಪಡೆದಿದೆ. ಆದರೆ ಇಲ್ಲಿ ಶೌಚಾಲಯವೇ ನಿರ್ಮಾಣಗೊಂಡಿಲ್ಲ ಎಂದು ದೂರಿದ ಉಸ್ಮಾನ್ ಕರೋಪಾಡಿ, ತಪ್ಪು ಮಾಹಿತಿ ನೀಡಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶೌಚಾಲಯ ಇಲ್ಲದಿದ್ದರೂ ಪ್ರಶಸ್ತಿ ಪಡೆದುಕೊಂಡಿದ್ದೀರಿ ಎಂದರೆ ಏನರ್ಥ, ಇದು ನಾಚಿಕೆ ಅಲ್ವ ಎಂದು ಪ್ರಶ್ನಿಸಿದ ಉಸ್ಮಾನ್, ತಾಪಂಗೆ ಹೀಗಾದರೆ ಗೌರವ ಇದೆಯಾ, ಪಿಡಿಒಗೆ ನೋಟಿಸ್ ವಿತರಿಸಿ ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯ ಸಂಜೀವ ಪೂಜಾರಿ ದನಿಗೂಡಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಮಾಡಿ:
ನಿರ್ವಹಣೆ ನಡೆಸಲು ಅಸಾಧ್ಯವಾದರೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್ ನರೇಂದ್ರಬಾಬು, ಇದರ ಸಾಧಕ, ಬಾಧಕಗಳ ಕುರಿತು ಒಂದು ವರ್ಷಗಳ ಪರಿಶೀಲನೆ, ಪರೀಕ್ಷೆಗಳು ಅಗತ್ಯವಿದೆ. ಈ ಸಂದರ್ಭ ಎಲ್ಲಿ ತೊಂದರೆ ಇದೆಯೋ ಅಲ್ಲೆಲ್ಲ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ ಕೆಆರ್‌ಐಡಿಎಲ್ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದ ಸುಭಾಶ್ಚಂದ್ರ ಶೆಟ್ಟಿ, ಮತ್ತು ಎಂ.ಎಸ್.ಮಹಮ್ಮದ್, ಅಧಿಕಾರಿಗಳನ್ನು ಸಭೆಗೆ ಕರೆಯಿಸಬೇಕು ಎಂದು ಒತ್ತಾಯಿಸಿದರು. ಸತತ ದೂರವಾಣಿ ಕರೆ ಮಾಡಿದ ಬಳಿಕ ಕಿರಿಯ ಅಧಿಕಾರಿಯನ್ನು ಸಭೆಗೆ ಬಂದರು.
ಮೆಸ್ಕಾಂ ಸಮಸ್ಯೆಗಳ ಕುರಿತು ಗ್ರಾಪಂ ಪಿಡಿಒ, ಮೆಸ್ಕಾಂ ಲೆಕ್ಕಾಧಿಕಾರಿ, ಇಂಜಿನಿಯರ್ ಗಳ ಸಮನ್ವಯ ಸಭೆಯೊಂದನ್ನು ಕರೆಯಲಾಗುವುದು ಎಂದು ಇಒ ರಾಜಣ್ಣ ಸಭೆಗೆ ತಿಳಿಸಿದರು.
ವಿವಿಧ ವಿಷಯಗಳ ಕುರಿತು ಹೈದರ್ ಕೈರಂಗಳ, ಮಂಜುಳ ಕುಶಲ ಪೆರಾಜೆ, ಗೀತಾ ಚಂದ್ರಶೇಖರ್, ಸಂಜೀವ ಪೂಜಾರಿ ಬೊಳ್ಳಾಯಿ, ಆದಂ ಕುಂಞ, ಪ್ರಭಾಕರ ಪ್ರಭು, ಯಶವಂತ ಪೂಜಾರಿ ಪೊಳಲಿ, ಮಲ್ಲಿಕಾ ಶೆಟ್ಟಿ ಮಾತನಾಡಿದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆಯಾಗಿ ಧನಲಕ್ಷ್ಮೀ ಬಂಗೇರ ಅವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…