ಬಂಟ್ವಾಳ

ಜಾನುವಾರು ಅಕ್ರಮ ಸಾಗಾಟಕ್ಕೂ ಕಂಟೈನರ್ ಬಳಕೆ

  • ಹಂಚಿಕಟ್ಟೆಯಲ್ಲಿ ನಡೆದ ಅಪಘಾತ ಸಂದರ್ಭ ಕೃತ್ಯ ಬೆಳಕಿಗೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಸೋಮವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಹಂಚಿಕಟ್ಟೆಯಲ್ಲಿ ಕಂಟೈನರ್ ಒಂದು ರಸ್ತೆ ಬದಿ ಧರೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಆದರೆ ಈ ಅಪಘಾತ ಅಕ್ರಮವಾಗಿ ದನಗಳನ್ನು ಸಾಗಿಸುವ ಮತ್ತೊಂದು ಮಜಲನ್ನು ಅನಾವರಣಗೊಳಿಸಿತು.

ಜಾಹೀರಾತು

ಜಾನುವಾರು ಅಕ್ರಮ ಸಾಗಿಸಲು ಬೇರೆ ಬೇರೆ ವಾಹನಗಳನ್ನು ಉಪಯೋಗಿಸುವುದನ್ನು ನಾವು ಕೇಳಿದ್ದೇವೆ. ಓದಿದ್ದೇವೆ. ಆದರೆ ಬೃಹತ್ ಕಂಟೈನರ್ ಒಂದರಲ್ಲಿ ಜಾನುವಾರುಗಳನ್ನು ಸಾಗಿಸುವ ವ್ಯವಸ್ಥೆಯೂ ಇರುವುದು ಈ ಅಪಘಾತದಿಂದ ಸಾರ್ವಜನಿಕರಿಗೆ ಗೊತ್ತಾಯಿತು.

ಏನಾಯಿತು:

ತಾಲೂಕಿನ ವಗ್ಗ ಸಮೀಪದ ಹಂಚಿಕಟ್ಟೆಯಲ್ಲಿ ಸೋಮವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಒಂದು ರಸ್ತೆ ಬದಿಯ ಧರೆಗೆ ಢಿಕ್ಕಿ ಹೊಡೆಯಿತು. ಅಪಘಾತದಲ್ಲಿ ಜಾನುವಾರುವೊಂದು ಸ್ಥಳದಲ್ಲೇ ಮೃತಪಟ್ಟಿತು. ಉಳಿದ ಜಾನುವಾರುಗಳನ್ನು ರಕ್ಷಿಸಲಾಯಿತು. ಘಟನೆಯ ಬೆನ್ನಲ್ಲೇ ಕಂಟೈನರ್ ಚಾಲಕ ಸಹಿತ ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರಿನತ್ತ ಕಂಟೈನರ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದು ಅತಿವೇಗ ಹಾಗೂ ಅಜಾಗರೂಕತೆಯಿಂದ ಧಾವಿಸಿ ಸಾಗುತ್ತಿದ್ದ ಕಂಟೈನರ್ ಹಂಚಿಕಟ್ಟೆ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದರು.

ಅಪಘಾತ ನಡೆದ ಸಂದರ್ಭ ಜಾನುವಾರುಗಳ ಕಿರುಚಾಟವನ್ನು ಆಲಿಸಿದ ಸ್ಥಳೀಯರು ಕಂಟೈನರ್‌ನ ಬಾಗಿಲು ಮುರಿದು ಪರಿಶೀಲಿಸಿದಾಗ ಎರಡು ಕರುಗಳ ಸಹಿತ 9 ಎತ್ತು ಮತ್ತು 5 ಎಮ್ಮೆಗಳು ಪತ್ತೆಯಾದವು. ಒಂದು ಎತ್ತು ಢಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ್ದು ಕಂಡುಬಂತು. ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನ ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿ ಕಂಟೈನರ್ ಹಾಗೂ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದರು.
ಇದರಲ್ಲಿ ವ್ಯವಸ್ಥಿತ ಜಾಲ ಇರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಎಸ್ಪಿ ರವಿಕಾಂತೇ ಗೌಡ ಅವರ ನಿರ್ದೇಶನದಂತೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.