ರಾಜ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ಸರಿಯಿಲ್ಲ ಎಂದು ಯೋಜನೆಯನ್ನು ಟೀಕಿಸಿದವರು ಇಂದು ಅನ್ನಭಾಗ್ಯಕ್ಕೆ ಕೇಂದ್ರ ಸರಕಾರದ ಅನುದಾನ ಇದೆ ಎಂದು ಬ್ಯಾನರ್ ಹಾಕುವುದು ಯಾಕೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕಡೇಶಿವಾಲಯದ ಪೆರ್ಲಾಪು ಶಾಲಾ ಮೈದಾನದ ಬಳಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಆಶ್ರಯದಲ್ಲಿ ಕಡೆಶಿವಾಲಯ ಸಡಗರ ೨೦೧೮ ಹಾಗೂ ಸಾಧನ ಪತ್ರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈ, ಇಂದಿರಾಗಾಂಧಿ ಜಾರಿಗೊಳಿಸಿದ ಭೂ ಮಸೂದೆ ಕಾಯ್ದೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದ ಹಿಂದೂ ಸಮುದಾಯ ಹೆಚ್ಚಿನ ಪ್ರಯೋಜನವನ್ನು ಪಡುಕೊಂಡಿದೆ. ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಪಟ್ಟದಾರರ ಸಂಖ್ಯೆ ಸಾವಿರದ ಗಡಿ ದಾಟಿದೆ ಎಂದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಹಲವಾರು ಅನುಕೂಲಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಎಲ್ಲಾ ವರ್ಗದ ಜನರಿಗೆ ಸಮಾನವಾದ ಅವಕಾಶಗಳನ್ನೊ ಒದಗಿಸಿದೆ. ಹಿಂದುಳಿದವರು ಮುಂದೆ ಹೋಗಬೇಕಾದರೆ ಇತಿಹಾಸ ತಿಳಿದುಕೊಳ್ಳಬೇಕಾಗಿದೆ ಎಂದರು.
ದೇಶದಲ್ಲಿ ೧೮ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದ್ದರೂ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಕಾಂಗ್ರೆಸ್ ಆಳ್ವಿಕೆ ಇರುವ ಕರ್ನಾಟಕದಲ್ಲಿ ಮಾತ್ರ ಇದೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಂಡಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ರಾಜಕೀಯಕ್ಕೆ ಬಂದು ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ೬ ಬಾರಿ ಶಾಸಕನಾಗಿ, ಸಚಿವನಾಗಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ಇಲ್ಲಿನ ಜನತೆ ನೀಡಿದೆ. ಸೈದ್ದಾಂತಿಕ ನಿಲುವನ್ನು ಎಂದಿಗೂ ಬಿಟ್ಟು ಕೊಡದೆ ಎಲ್ಲಾ ಜಾತಿ ಧರ್ಮದ ಜನರು ಒಗ್ಗಟ್ಟಿನಿಂದ ಇರಬೇಕೆನ್ನುವ ಆಸೆ ನನ್ನದಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಜನರಲ್ಲಿ ಗುಲಗುಂಜಿಯಷ್ಟು ವ್ಯತ್ಯಾಸ ಮಾಡದೆ ಕೆಲಸ ಮಾಡಿದ ತೃಪ್ತಿ ಇದೆ ಎಂದರು.
ಕಾಂಗ್ರೆಸ್ ಮುಖಂಡ, ಚಿತ್ರನಟ ರಾಜಶೇಖರ್ ಕೋಟ್ಯಾನ್ ಸಾಧನ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆಗಳನ್ನು ನೀಡಿದೆ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಧರಣೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ರಮಾನಾಥ ರೈ, ರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ್ತಿ ಯಶಸ್ವಿ, ಚಾಲಕ ನಾರಾಯಣ ಪೂಜಾರಿ, ಶಿಲ್ಪಿ ರಂಜಿತ್ ಅವರನ್ನು ಸಭಾ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಪಾಣೆಮಂಗಳೂರು ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ವಿಜಯ್ ಕುಮಾರ್ ಎಸ್. ಕಡೇಶಿವಾಲಯ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳ ಮಾವೆ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಈಶ್ವರ ಪೂಜಾರಿ, ವಲಯ ಕಾಂಗ್ರೆಸ್, ಮಂಜುಳ ಕುಶಾಲಪ್ಪ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ವಾಸು ಪೂಜಾಋಇ ಪತ್ತೊಡಂಗೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೃತ್ಯ ಪ್ರದರ್ಶನ, ಕುದ್ರೋಳಿ ಗಣೇಶ್ ತಂಡದಿಂದ ಮ್ಯಾಜಿಕ್ ಪ್ರದರ್ಶನ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.