ಭಾರತದ ಇತಿಹಾಸ ಸೋಲಿನ ಇತಿಹಾಸವಲ್ಲ, ಅದು ಸಂಘರ್ಷದ ಪರಾಕ್ರಮದ ಇತಿಹಾಸವಾಗಿದೆ ಸ್ವಾತಂತ್ರ್ಯ ಹೋರಾಟದ ಸಹಸ್ರ ವರ್ಷಗಳು ಶೌರ್ಯ ಪರಂಪರೆಗಳ ಇತಿಹಾಸ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ್ ಪ್ರಮುಖ್ ಡಾ| ರವೀಂದ್ರ ಹೇಳಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಜರಗಿದ ರಾಜ್ಯ ಮಟ್ಟದ ವಿವಿಧ ವಿಶ್ವವಿದ್ಯಾನಿಲಯಗಳ ವಿಚಾರ ಸಂಕಿರಣದಲ್ಲಿ ‘ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶೌರ್ಯ ಪರಂಪರೆ ವಿಷಯದಲ್ಲಿ ಏರ್ಪಡಿಸಲಾದ ವಿಚಾರಗೋಷ್ಠಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಭಾರತದ ಮೇಲೆ ಸಹಸ್ರಾರು ವರ್ಷಗಳಲ್ಲಿ ಶಕರು, ಹೂಣರು, ಕುಶಾನರು, ಮೊಗಲರು, ದಾಳಿಮಾಡಿದ್ದರು. ಆದರೂ ಈ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ರಾಜಕೀಯವಾಗಿ ಈ ದೇಶವನ್ನು ಆಳಿದ ಪರಕೀಯರು ದೇಶದ ಭಾಗವಾಗಿಯೇ ಸೇರಿಕೊಂಡರು. ೧೮೫೭ರಲ್ಲಿ ಜಗತ್ತಿನ ಅತಿ ದೊಡ್ಡ ಸ್ವಾತಂತ್ರ್ಯ ಸಂಗ್ರಾಮ ಭಾರತದಲ್ಲಿ ನಡೆದಿತ್ತು, ಬ್ರಿಟಿಷರು ತಂತ್ರಗಾರಿಕೆಯಿಂದ ಸಮಾಜವನ್ನು , ದೇಶವನ್ನು ಒಡೆದು ಆಳುವ ನೀತಿಯ ಮೂಲಕ ಭಾರತವನ್ನು ಆಳಿದರು ಎಂದು ಇತಿಹಾಸದ ಘಟನಾವಳಿಗಳನ್ನು ಪ್ರಸ್ತುತಪಡಿಸಿದರು.
ಇತಿಹಾಸ ಕಳೆದು ಹೋದ ಅನುಭವವಾಗಿದ್ದು ಕೇವಲ ಹುಟ್ಟು ಸಾವಿನ ದಾಖಲೆಗಳಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಸಂಸ್ಕೃತಿಗಾಗಿ ಜೀವನ ಸಮರ್ಪಣೆ ಮಾಡಿದವರ ಹೋರಾಟದ ಪ್ರೇರಣದಾಯಕ ಅಂಶಗಳು ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು. ಸುಭಾಶ್ಚಂದ್ರಭೋಷ್, ವಿವೇಕಾನಂದರ ಸಂದೇಶಗಳು ಇವತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾದೀತು ಎಂದು ಸ್ಪಷ್ಟಪಡಿಸಿದರು.
ಮೊಗಲರು ಮಾಡಿದ ದಾಳಿಗೆ ಇಂದಿನ ಮುಸಲ್ಮಾನರು ಜವಾಬ್ದಾರರಲ್ಲ . ಭಾರತ ವಿಭಜನೆ ಇತಿಹಾಸದ ದುರಂತವಾಗಿದ್ದು, ಬ್ರಿಟಿಷರ ವಿರುದ್ದ ಹೊರಾಟ ನಡೆದಿರುವುದು ಹಿಂದೂ ದೇಶದ ಇತಿಹಾಸವಲ್ಲವೇ? ಎಂದು ಪ್ರಶ್ನಿಸಿದ ಅವರು ೨೫೦೦ ವರ್ಷಗಳಿಂದ ಶತ್ರುಗಳ ವಿರುದ್ದ ಹಿಂದುಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಈಗಲೂ ಹೊರಾಟ ಮುಂದುವರಿಯುತ್ತಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಎಲ್.ಧರ್ಮ, ತುಮಕೂರು ವಿ.ವಿ.ಯ ಡಾ. ಕೊಟ್ರೇಶ್ ಉಪಸ್ಥಿತರಿದ್ದರು.
ವಂದೇ ಮಾತರಂ ರಾಷ್ಟ್ರೀಯ ಮಂತ್ರ: ಸು.ರಾಮಣ್ಣ
ಭರತ ಭೂಮಿ ಬರೀಯ ಮಣ್ಣಲ್ಲ. ಅದು ನಮ್ಮ ಮಾತೃ ಭೂಮಿ. ದುರ್ಗೆ, ಲಕ್ಷ್ಮೀ ಸರಸ್ವತಿಯರ ಆವಾಸ ಸ್ಥಾನ. ದುರ್ಗಾಮಾತೆ ಶಕ್ತಿಯ ಸ್ವರೂಪ. ದೇವತೆಗಳ ಕೈಗಳಲ್ಲಿ ಶಸ್ತಾಸ್ತ್ರಗಳು ಇರುವುದು ದುಷ್ಟರ ನಾಶದ ಸಂಕೇತವಾಗಿ. ಸಜ್ಜನರ ರಕ್ಷಣೆಗಾಗಿ ಎಂದು ರಾ.ಸ್ವ. ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದರು. ಸರಿಯಾದ ಸಂಕಲ್ಪಕ್ಕೆ ಸಮರ್ಪಕ ಸಂಸ್ಕಾರ ದೊರೆತಾಗ ಪರಿವರ್ತನೆ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಗೂ ದೇಶಕ್ಕೂ ಒಂದು ಅಸ್ಮಿತೆ, ಗುರುತಿಸುವಿಕೆ ಇದೆ. ಭಾರತ ಜಗದ್ಗುರು ಆಗಬೇಕಾದರೆ ಅಂತಹ ಸಂಕಲ್ಪ ನಮ್ಮದಾಗಬೇಕು ಎಂದರು.ಜಗತ್ತಿನ ದೊಡ್ಡಣ್ಣ ಎಂದು ಅಮೇರಿಕ ಗುರುತಿಸಲ್ಪಟಿದೆ. ಇಂಗ್ಲೆಂಡ್ ಸೂರ್ಯಮುಳುಗದ ಸಾಮ್ರಾಜ್ಯ ಕಟ್ಟಿದ ದೇಶ ಎನ್ನಲಾಗಿದೆ. ಭಾರತ ಆಧ್ಯಾತ್ಮದ ಶಕ್ತ ಜಗದ್ಗುರು ಮಾರ್ಗದರ್ಶಕ ಎಂದು ಗುರುತಿಸಲ್ಪಟ್ಟಿದೆ ಎಂದು ವಿವರಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತಮಾಧವ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿದ್ಯಾವರ್ದಕ ಸಂಘದ ಸಂಚಾಲಕ ಡಾ| ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಾಯಾಜಿ ಉಪಸ್ಥಿತರಿದ್ದರು. ನ್ಯಾಯವಾದಿ ಸತೀಶ್ ಶಿವಗಿರಿ ಸ್ವಾಗತಿಸಿ, ಉಪನ್ಯಾಸಕ ಹರೀಶ್ ವಂದಿಸಿದರು.
ಇದೇ ಸಂದರ್ಭ ಸು.ರಾಮಣ್ಣ ೬೨ ನಿವೃತ್ತ ಯೋಧರೊಂದಿಗೆ ಸಂವಾದ ನಡೆಸಿದರು. ಏಳು ವಿವಿಗಳಿಂದ ೧೪ ಪ್ರಾಧ್ಯಾಪಕರು, ೩೦ ಉಪನ್ಯಾಸಕರು, ೫೮೬ ವಿದ್ಯಾರ್ಥಿಗಳು ಸಹಿತ ೧೫೧೭ ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.