ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಿಪಿಪಿ ಯೋಜನೆಯಡಿ ಖಾಸಗಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣವನ್ನು 20 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಸ್ ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ತಾಪಂ ಹಳೇ ಕಟ್ಟಡವನ್ನು ಕೆಡಹಲಾಗುತ್ತಿದ್ದು, ಅಲ್ಲಿದ್ದ ಪ್ರೆಸ್ ಕ್ಲಬ್ ಅನ್ನು ತಾಪಂ ವಾಣಿಜ್ಯ ಸಂಕೀರ್ಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರಿತ ಪ್ರೆಸ್ ಕ್ಲಬ್ ಚಟುವಟಿಕೆಗಳಿಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ಸಚಿವ ರೈ, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸೂಕ್ತವಾದ ಭವನವನ್ನು ಅವರದ್ದೇ ಸ್ವಂತ ಜಾಗ ಒದಗಿಸಿದರೆ, ನಿರ್ಮಿಸಲು ಸರಕಾರದ ವತಿಯಿಂದ ನೆರವು ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು. ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಕೆಲವೊಂದು ಸಮಸ್ಯೆಗಳು ಉದ್ಭವಿಸುವುದು ಸಹಜ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದರೆ ಪ್ರಗತಿ ಸಾಧ್ಯ ಎಂದು ಸಚಿವರು ಮನವಿ ಮಾಡಿದರು.
ಇದೇ ಸಂದರ್ಭ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ, ಪ್ರೆಸ್ ಕ್ಲಬ್ ಗೆ ಶುಭ ಹಾರೈಸಿದರು. ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಉಪಸ್ಥಿತರಿದ್ದರು. ಪತ್ರಕರ್ತ ಹರೀಶ ಮಾಂಬಾಡಿ ಕಾರ್ಯಕ್ರಮ ನಿರೂಪಿಸಿದರು.