ವೀರ ಯೋಧರ ಸಾಹಸಗಾಥೆಗಳನ್ನು ಅರಿತರೆ, ನೈಜ ಇತಿಹಾಸ ನಮಗೆ ದೊರೆಯುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೀರ ಸಾವರ್ಕರ್ ಮಂಟಪದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ಶನಿವಾರ ಏರ್ಪಡಿಸಿದ್ದ ’ಭಾರತೀಯ ಶೌರ್ಯ ಪರಂಪರೆ’ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆಯನ್ನು ವೀರ ಯೋಧರನ್ನು ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡುವ ಮೂಲಕ ಆಚರಿಸುತ್ತಿದ್ದೇವೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮೂಡುವುದರ ಜೊತೆಗೆ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಅವರು ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕರ್ನಲ್ ಪ್ರೊ.ಅರವಿಂದ ಕುಮಾರ್ ಗುಪ್ತ ಮಾತನಾಡಿ, ಶಾಸ್ತ್ರ ಸಮ್ಮತ ಶಸ್ತ್ರಾಭ್ಯಾಸ ಬಗ್ಗೆ ವಿವರಿಸಿದರು. ಬಾಲ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಜೊತೆಗೆ ಬದುಕಿನ ನಿರ್ಧಾರ ಕೈಗೊಳ್ಳುವ ಬಗ್ಗೆಯೂ ಯೋಚಿಸಬೇಕು ಎಂದರು.
ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ರಾಜಕೀಯ ನಾಯಕರು ಸ್ವಾರ್ಥಕ್ಕಾಗಿ ಸುಳ್ಳು ಇತಿಹಾಸ ಸೃಷ್ಟಿಸಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡುವುದರ ಬದಲಾಗಿ ದೇಶಕ್ಕಾಗಿ ಬದುಕುವ ಜನರ ಅಗತ್ಯವಿದೆ ಎಂದರು.
ಇದೇ ವೇಳೆ 62 ಮಂದಿ ನಿವೃತ್ತ ಯೋಧರನ್ನು ಗುರುತಿಸಿ ಸನ್ಮಾನಿಸಲಾಯಿತು. ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕ್ ಸು.ರಾಮಣ್ಣ ಅವರು ’ವೀರ ಯೋಧರ ಪರಿಚಯ ಪುಸ್ತಕ’ ಬಿಡುಗಡೆಗೊಳಿಸಿದರು.
70 ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ:
ಪ್ರಗತಿಪರ ಕೃಷಿಕ ಶಂಭು ಭಟ್ ಮಿಲಿಟರಿ ನಿಧಿಗೆ ರೂ 1 ಲಕ್ಷ ದೇಣಿಗೆ ಸಮರ್ಪಿಸಿದರು. ಇಲ್ಲಿನ ೭೦ ಮಂದಿ ಪಿಯೂಸಿ ವಿದ್ಯಾರ್ಥಿಗಳು ಮಿಲಿಟರಿ ತರಬೇತಿ ಪಡೆಯಲು ಮುಂದಾಗಿದ್ದಾರೆ ಎಂದು ಘೋಷಿಸಲಾಯಿತು.ಮಿಲಿಟರಿ ವೈದ್ಯ ಕರ್ನಲ್ ಡಾ.ಮೋಹನಕೃಷ್ಣ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿದರು. ಸಂಚಾಲಕ ವಸಂತ ಮಾಧವ ವಂದಿಸಿದರು. ಉಪನ್ಯಾಸಕಿ ಹರ್ಷಿತಾ ಯೋಧರನ್ನು ಪರಿಚಯಿಸಿದರು. ಉಪನ್ಯಾಸಕ ಯತಿರಾಜ್ ಮತ್ತು ವಿದ್ಯಾರ್ಥಿನಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಯೋಧರೊಂದಿಗೆ ಸಂವಾದ, ಗೋಷ್ಠಿ:
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶೌರ್ಯ ಪರಂಪರೆ ಬಗ್ಗೆ ಆರ್‌ಎಸ್‌ಎಸ್ ಪ್ರಾಂತ ಸಹ ಬೌದ್ಧಿಕ್ ಡಾ.ರವೀಂದ್ರ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶೌರ್ಯ ಪರಂಪರೆ ಬಗ್ಗೆ ಸಂಸ್ಕಾರ ಭಾರತಿ ಪ್ರಾಂತ ಕಾರ್ಯದರ್ಶಿ ಆದರ್ಶ ಗೋಖಲೆ ಇವರು ಗೋಷ್ಠಿಯಲ್ಲಿ ವಿಷಯ ಮಂಡಿಸಿದರು. ಯೋಧರೊಂದಿಗೆ ಸಂವಾದ ಮತ್ತು ಪ್ರಶ್ನೋತ್ತರ ನಡೆಸುವ ಮೂಲಕ ವಿದ್ಯಾರ್ಥಿಗಳು ಸಂಭ್ರಮ ಪಟ್ಟರು. ಇಲ್ಲಿನ ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ಮಿಲಿಟರಿ ಹೆಲಿಕಾಪ್ಟರ್, ಹಡಗು, ಭೀಷ್ಮ ಹೆಸರಿನ ಬಂಕರ್ ಮಾದರಿ ಸಹಿತ ಛತ್ರಪತಿ ಶಿವಾಜಿ, ಕೋಟಿ-ಚೆನ್ನಯ, ವೀರ ರಾಣಿ ಅಬ್ಬಕ್ಕ, ಒನಕೆ ಓಬವ್ವ ಮತ್ತಿತರ ವೇಷಧಾರಿಗಳು ಗಮನ ಸೆಳೆದರು.