ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ತಂದುಕೊಂಡರೆ ಸ್ವಚ್ಛ ಭಾರತದ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆಯಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಜಿತಕಾಮಾನಂದಜಿ ಮಹಾರಾಜ್ ಹೇಳಿದರು.
ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೈಗೊಂಡ ಸ್ವಚ್ಛ ರಾಯಭಾರಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪದ ಮಾತುಗಳನ್ನಾಡುತ್ತಿದ್ದರು.
ಮುಂದುವರಿದ ದೇಶಗಳಲ್ಲಿ ಜನರು ಕಾನೂನಿಗೆ ತಲೆಬಾಗುವ ಶಿಸ್ತನ್ನು ಬಾಲ್ಯದಿಂದಲೇ ರೂಢಿಗೊಳಿಸಿಕೊಳ್ಳುತ್ತಾರೆ. ಶಿಸ್ತು ಮತ್ತು ಬದ್ಧತೆಯನ್ನು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕಲಿಸುವ ವ್ವವಸ್ಥೆ ಬೇಕು ಎಂದು ಅವರು ಹೇಳಿದರು.
ಸ್ವಚ್ಛ ರಾಯಭಾರಿ ಅಭಿಯಾನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಛತಾ ಜಾಗೃತಿ ಉಂಟುಮಾಡಿದ್ದರು. ಕಾರ್ಯಕ್ರಮ ದಲ್ಲಿ ಸ್ವಚ್ಛತಾ ರಾಯಭಾರಿ ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ನಂದಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಹದರಾಲಿ ಸ್ವಾಗತಿಸಿದರು. ಪ್ರೊ. ಶಶಿಕಲಾ ಹಾಗೂ ಗ್ರಂಥಪಾಲಕ ಪುಟ್ಟೇಗೌಡ ಹೆಚ್ ಸಿ ಉಪಸ್ಥಿತರಿದ್ದರು. ಬಂಟ್ವಾಳ ರೋಟರಿ ಕ್ಲಬ್, ಕಾಲೇಜಿನ ಪರಿಸರಸಂಘ ,ರಾ.ಸೇ. ಯೋಜನಾ ಘಟಕ ಮತ್ತು ಗ್ರಂಥಾಲಯವಿಭಾಗಗಳ ಸಹಯೋಗದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೀರ್ತಿರಾಜ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.