www.bantwalnews.com – ಸಂಪಾದಕ: ಹರೀಶ ಮಾಂಬಾಡಿ
for video click:
ಕನ್ಯಾಡಿ ಶ್ರೀ ರಾಮ ಕ್ಷೇತ್ರ ಇದರ ಅಧೀನದಲ್ಲಿರುವ ಬಂಟ್ವಾಳ ತಾಲೂಕು ಶ್ರೀ ರಾಮಕ್ಷೇತ್ರ ಸೇವಾ ಸಮಿತಿ ಇದರ ಆಶ್ರಯದಲ್ಲಿ ಫೆ. ೧೮ರಂದು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿಯ ಮೈದಾನದ ಆತ್ಮಾನಂದ ಸರ್‍ವತಿ ವೇದಿಕೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಹಾಗೂ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ತಿಳಿಸಿದರು.
ಸೋಮವಾರ ಬೆಳಗ್ಗೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಅವರು ಸ್ವಾಮೀಜಿಯವರು ಬೇರೆ ಬೇರೆ ಜಿಲ್ಲೆಗಳಲ್ಲಿರುವ ತಮ್ಮ ಮಠದ ಮೂಲಕ ಸಂಸ್ಕಾರಯುತ ಉಚಿತ ವಸತಿಯುತ ಶಿಕ್ಷಣವನ್ನು ನೀಡುತ್ತಿದ್ದು ಅದನ್ನು ಬಂಟ್ವಾಳದಲ್ಲಿಯೇ ಮಾಡಬೇಕೆಂಬ ಉದ್ದೇಶದಿಂದ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಯಾವುದೇ ಧನಸಹಾಯ ಪಡೆಯದೆ ಎಲ್ಲವೂ ಉಚಿತವಾಗಿ ನಡೆಯಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 8.30ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯಿಂದ ಆತ್ಮಾನಂದ ಸರಸ್ವತಿ ವೇದಿಕೆಯವರೆಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀಗಳ ಪುರಪ್ರವೇಶ ನಡೆಯಲಿದೆ. ಬೆಳಿಗ್ಗೆ ೯ಕ್ಕೆ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಶ್ರೀರಾಮ ಕ್ಷೇತ್ರ ಸಂಸ್ಥಾನದ ಪುರೋಹಿತ ವೇ.ಮೂ. ಲಕ್ಷ್ಮೀಪತಿ ಗೋಪಾಲಾಚಾರ್ಯರವರ ನೇತೃತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವ ಆರಂಭಗೊಳ್ಳಲಿದೆ. ಬಳಿಕ ಗುರುವಂದನಾ ಕಾರ್ಯಕ್ರಮ, ಧಾರ್ಮಿಕ ಸಭೆ, ಮಂತ್ರಾಕ್ಷತೆ, ಅನ್ನಪ್ರಸಾದ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸಂಚಾಲಕ ಟಿ. ಕೃಷ್ಣಪ್ಪ ಪೂಜಾರಿ ಮಾತನಾಡಿ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವರಿ ಸಚಿವ ಬಿ.ರಮಾನಾಥ ರೈ, ಸಂಸದ ನಳೀನ್ ಕುಮಾರ್ ಕಟೀಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಬಿಲ್ಲವ ಸಮಾಝ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮ ಯಶಸ್ಸಿನ ದೃಷ್ಟಿಯಿಂದ ತಾಲೂಕಿನ ೮೪ ಗ್ರಾಮಗಳಲ್ಲಿ ಎಲ್ಲಾ ಜಾತಿ ಜನಾಂಗಗಳ, ಎಲ್ಲಾ ಪಕ್ಷಗಳ ಪ್ರಮುಖರನ್ನು ಒಟ್ಟುಗೂಡಿಸಿ ಸಭೆಗಳನ್ನು ನಡೆಸಿ 81 ಗ್ರಾಮಗಳಲ್ಲಿ ಸೀತಾರಾಮ ಕ್ಷೇತ್ರ ಸೇವಾ ಸಮಿತಿ ರಚನೆ ಮಾಡಿ ಅಧ್ಯಕ್ಷರು ಮತ್ತು ಸಂಚಾಲಕರನ್ನು ನೇಮಕ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಸಿದ್ದತೆಗಳು ನಡೆಯುತ್ತಿದೆ. ಬೆಳಿಗ್ಗೆ 8ರಿಂದ 11ರರೆಗೆ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಇದೆ, ಎಲ್ಲಾ ಗ್ರಾಮಗಳಿಂದ ಬರುವ ಭಕ್ತರಿಗೆ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಧ್ಯಾಹ್ನದ ಬಳಿಕ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.
7ರಂದು ಚಪ್ಪರ ಮುಹೂರ್ತ
ಸೀತಾರಾಮ ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಫೆ.೭ರಂದು ಚಪ್ಪರ ಮುಹೂರ್ತ ನಡೆಯಲಿದೆ ಎಂದು ಸಂಜೀವ ಪೂಜಾರಿ ತಿಳಿಸಿದರು. ಈ ಸಂದರ್ಭ ತಾಲೂಕಿನ ಎಲ್ಲ ಗ್ರಾಮ ಸಮಿತಿಗಳ ಅಧ್ಯಕ್ಷರು, ಸಂಚಾಲಕರು ಸಹಿತ ಭಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಸ್ವಾಗತ ಸಮಿತಿ ಅಧ್ಯಕ್ಷ ಭುವನೇಶ್, ಸಂಚಾಲಕ ಬೇಬಿ ಕುಂದರ್, ತಾಲೂಕು ಸಂಚಾಲಕ ಬಿ.ಮೋಹನ್, ಪುರಸಭಾ ವಲಯ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪ್ರಧಾನ ಸಂಚಾಲಕ ರಾಮದಾಸ್ ಬಂಟ್ವಾಳ, ಮಹಿಳಾ ಘಟಕದ ಅದ್ಯಕ್ಷೆ ಜಯಂತಿ ವಿ.ಪೂಜಾರಿ, ಭಾರತಿ ಬಿ.ಕುಂದರ್ ಹಾಜರಿದ್ದರು.