ಮನುಷ್ಯರಲ್ಲಿ ಸಾತ್ವಿಕ ಭಾವ ಹೆಚ್ಚಾಗಲು ದೇವರ ಕಾರ್ಯ ಮಾಡಬೇಕು. ದೈವಗಳ ಆರಾಧನೆಯಲ್ಲಿ ತುಳು ಸಂಸ್ಕೃತಿ ಅಡಗಿದೆ. ದೈವ ಮತ್ತು ಭೂಮಿಗೆ ಅನನ್ಯ ಸಂಬಂಧವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಪೆರಾಜೆ ಗ್ರಾಮದ ಸಾದಿಕುಕ್ಕು ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ-ಮಲೆಕೊರತಿ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೈವ ದೇವರ ಕಾರ್ಯ ಮಾಡಿದಲ್ಲಿ ಧರ್ಮ ಚಿಂತನೆಗೆ ದಾರಿಯಾಗುತ್ತದೆ. ನಾವು ಪ್ರಕೃತಿಯಲ್ಲಿ ದೇವರನ್ನು ಕಾಣಬಹುದು ಎಂದು ಹೇಳಿದ ಅವರು. ಸನಾತನ ಧರ್ಮವನ್ನು ಉಳಿಸುವ ಕಾರ್ಯ ಸಾದಿಕುಕ್ಕುವಿನಲ್ಲಿ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸನಾತನ ಹಿಂದೂ ಧರ್ಮ ವಿಶಾಲ ತಳಹದಿಯನ್ನು ಹೊಂದಿದೆ. ದೇವರ ಕೆಲಸ ಮಾಡುವವ ಎಂದೂ ಕೋಮುವಾದಿಯಲ್ಲ, ಇನ್ನೊಂದು ಧರ್ಮದವರನ್ನು ಧ್ವೇಷಿಸುವವನನ್ನು ಕೋಮುವಾದಿ ಎಂದು ಹೇಳಬಹುದು. ಮನಷ್ಯರಾಗಿ ಬದುಕಿ ಮನುಷ್ಯರನ್ನು ಪ್ರೀತಿಸಿದಾತ ದೇವರನ್ನು ಹತ್ತಿರವಾಗಿಸಲು ಸಾಧ್ಯ. ನಾವೆಲ್ಲರೂ ಶಾಂತಿ ಸಮಾದಾನದ ಸಮಾಜಕಟ್ಟುವ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಚೌಟ ಮಾಣಿ ಗುಡ್ಡೆ, ಕ್ಷೇತ್ರದ ಮಾರ್ಗದರ್ಶಕಿ ಪದ್ಮವತಿ ಆಳ್ವ, ಉಪಾಧ್ಯಕ್ಷರಾದ ಕುಶಲ ಎಂ ಪೆರಾಜೆ, ಶ್ರೀನಿವಾಸ್ ಪೆರಾಜೆ, ಕೋಶಾಧಿಕಾರಿ ಬಿ.ಟಿ ನಾರಾಯಣ ಭಟ್, ಗೌರವ ಸಲಹೆಗಾರ ಬಿ ಅಪ್ರಾಯ ಪೈ, ಶ್ರೀನಾಥ ಆಳ್ವ ಪೆರಾಜೆಗುತ್ತು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಚಂಡಿಕಾ ಹೋಮ, ಶ್ರೀ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ನಡೆಯಿತು. ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ನೇರಳಕಟ್ಟೆ, ಮಾಣಿ, ಬುಡೋಳಿ ಮೂಲಕ ಹೊರೆಕಾಣಿಕೆ ಮೆರವಣಿಗೆ ಸಮರ್ಪಿಸಲಾಯಿತು.
ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು. ಅನುವಂಶೀಯ ಆಡಳಿತ ಮೊಕ್ತೇಸರರಾದ ಶ್ರೀಕಾಂತ ಆಳ್ವ ಪೆರಾಜೆಗುತ್ತು ಪ್ರಸ್ತಾವಣೆಗೈದರು. ಪ್ರಧಾನ ಕಾರ್ಯದರ್ಶಿ ಜನಾರ್ಧನ ಪೆರಾಜೆ ವಂದಿಸಿದರು. ಅಧ್ಯಕ್ಷ ಜಯರಾಮ ರೈ ಸ್ವಾಗತಿಸಿದರು. ದೀಪಾಲಿ, ಸ್ಮೀತಾ, ಸುಶ್ಮಿತಾ ಪ್ರಾರ್ಥಿಸಿದರು.