ನಮ್ಮ ತಪ್ಪುಗಳನ್ನು ತಿದ್ದಿಕೊಂಡು ನಡೆದರೆ, ಸಮಾಜದಲ್ಲಿ ಸಮಸ್ಯೆಗಳೇ ಇರುವುದಿಲ್ಲ ಎಂದು ಒಡಿಯೂರು ಕ್ಷೇತ್ರದ ಸಾಧ್ವೀ ಮಾತಾನಂದಮಯೀ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾಗಿರುವ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಪಂಚಮ ವರ್ಧಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇತರರ ತಪ್ಪನ್ನು ಬೊಟ್ಟುಮಾಡುತ್ತಲೇ ಹೋಗುವ ನಾವು ತಪ್ಪುಗಳನ್ನು ಹೆಚ್ಚಿಸುತ್ತಲೇ ಹೋಗುತ್ತೇವೆ. ಇತರರ ತಪ್ಪು ಹುಡುಕುವುದಕ್ಕಿಂತ ನಮ್ಮ ತಪ್ಪನ್ನು ತಿದ್ದುವುದು ಒಳಿತು. ಆಗ ಸಮಾಜದಲ್ಲಿ ಸಮಸ್ಯೆಗಳಿರುವುದಿಲ್ಲ. ಭಗವಂತನ ಧ್ಯಾನ, ನೊಂದವರ ಸೇವೆ, ಸತ್ಕರ್ಮಗಳಿಂದ ಜೀವನ ನೆಮ್ಮದಿ ಮತ್ತು ಶಾಂತಿಯನ್ನು ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಿದರು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸೇವಾ ಸಮಿತಿ ಉಪಾಧ್ಯಕ್ಷೆ ವರ್ಮುಡಿ ಪದ್ಮಿನಿ ರಾಮ ಭಟ್ ಆಲಂಗಾರು, ಹವ್ಯಕ ಮಹಾಮಂಡಲ ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿಟ್ಲ ವಲಯ ಕೋಶಾಧಿಕಾರಿ ಮುರಳೀಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು. ಕೇಪು ವಲಯ ಅಧ್ಯಕ್ಷ ಜನಾರ್ದನ ಭಟ್ ಅಮೈ ವಂದಿಸಿದರು.
ಬೆಳಗ್ಗೆ ಗಣಪತಿ ಹವನ, ಶತರುದ್ರ ಜಪ, ಕಾಮಧೇನು ಹವನ, ನಾಗ-ರಕ್ತೇಶ್ವರೀ ತಂಬಿಲ, ಕುಂಕುಮಾರ್ಚನೆ, ನವಕ ಕಲಶಾಭಿಷೇಕ, ಶತರುದ್ರ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ವಿಶ್ವಭಾರತಿ ಬಳಗದ ಯಕ್ಷಗಾನ ತಾಳಮದ್ದಳೆ ದಕ್ಷಾಧ್ವರ ನಡೆಯಿತು.