ಬಂಟ್ವಾಳ

ಪೂರ್ತಿ ಮುಗಿಯುವ ಮೊದಲೇ ಓಪನ್, ಬಿ.ಸಿ.ರೋಡ್ ಸರ್ವೀಸ್ ರಸ್ತೆ ಭಾರೀ ಡೇಂಜರ್!

photo – Jayananda Peraje

  • ಹರೀಶ ಮಾಂಬಾಡಿ

www.bantwalnews.com

ಎಡ, ಬಲಗಳು ಅಪಾಯಕಾರಿಯಾಗಿದ್ದರೂ ಸೋಮವಾರ ಬಿ.ಸಿ.ರೋಡ್ ಸರ್ವೀಸ್ ರಸ್ತೆಯುದ್ದಕ್ಕೂ ವಾಹನಗಳು ಓಡಾಡುವುದಕ್ಕೆ ಮುಕ್ತವಾಗಿರುವುದನ್ನು ಕಂಡು, ವಾಹನ ಸವಾರರೂ ಹಿಂದೆ ಮುಂದೆ ನೋಡದೆ ವೇಗವಾಗಿ ಸಾಗಿದರೆ, ಪಾದಚಾರಿಗಳು ಕಕ್ಕಾಬಿಕ್ಕಿಯಾದರು. ಸುದೀರ್ಘ ಐದು ತಿಂಗಳ ಬಳಿಕ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಬಿ.ಸಿ.ರೋಡ್ ಸರ್ವೀಸ್ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದರೂ ಅದರಲ್ಲಿ ವಾಹನಗಳು ಎಲ್ಲಿ ಓಡಾಡುವುದು ಹಾಗೂ ಜನರು ಹೇಗೆ ನಡೆದುಕೊಂಡು ಹೋಗುವುದು ಎಂಬ ಪ್ರಶ್ನೆ ಮೂಡಿದೆ. ಎಲ್ಲವನ್ನೂ ಬಂದದ್ದು ಬಂದ ಹಾಗೆ ಸ್ವೀಕರಿಸುವ ಹೃದಯವೈಶಾಲ್ಯವುಳ್ಳ  ಬಿ.ಸಿ.ರೋಡಿನ ಜನರು ಇದನ್ನೂ ಸಹಿಸಿಕೊಂಡು ಹೋಗುವ ಕಾರಣ ಇನ್ನು ಮುಂದಕ್ಕೆ ಸರ್ವೀಸ್ ರಸ್ತೆಯಲ್ಲಿ ವೃದ್ಧರು, ಮಕ್ಕಳು, ಹೃದಯರೋಗಿಗಳು, ಕಣ್ಣು, ಕಿವಿ. ಚುರುಕಾಗಿಲ್ಲದವರು ನಡೆದುಕೊಂಡು ಹೋಗುವಾಗ ಜಾಗ್ರತೆ ವಹಿಸುವುದು ಒಳಿತು!

ಸರ್ವೀಸ್ ರಸ್ತೆ ಕುರಿತು ಕಳೆದ ವರ್ಷವಿಡೀ ಬಂಟ್ವಾಳನ್ಯೂಸ್ ಸಹಿತ ಎಲ್ಲ ಮಾಧ್ಯಮಗಳು ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದವು.  ಜಗತ್ತಿನ ಬೇರೆ ಬೇರೆ ವಿಚಾರಗಳ ಕುರಿತು ಪ್ರತಿಭಟನೆ ಇತ್ಯಾದಿಗಳು ನಡೆಸುವ ಮೊದಲು ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಮಾನವ ನಡೆದಾಡುವಂತೆ ಮಾಡಲು ಎಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ. ಏಕೆಂದರೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವವರು ಎಲ್ಲ ಜಾತಿ, ಧರ್ಮ, ಕುಲಗಳಿಗೆ ಸೇರಿದ ಮನುಷ್ಯರು.

ಏನಾಗಿದೆ?

ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ಸೋಮವಾರ ವಾಹನ ಸಂಚಾರಕ್ಕೆ ದಿಢೀರ್ ಮುಕ್ತಗೊಳಿಸಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಗೊಂದಲ ಉಂಟುಮಾಡಿತು. ಪದ್ಮಾ ಕಾಂಪ್ಲೇಕ್ಸ್ ಬಳಿ ಇದ್ದ ಕಾಮಗಾರಿಯನ್ನು ಮುಗಿಸಿ ಕಾಂಕ್ರೀಟ್ ಕಾಮಗಾರಿ ನಡೆಸಿದ ಬಳಿಕ ಇದ್ದದ್ದು ಇದ್ದ ಹಾಗೆಯೇ ವಾಹನ ಸಂಚಾರಕ್ಕೆ ತೆರವುಗೊಳಿಸಿದ್ದು, ಸಮಸ್ಯೆಗೆ ಕಾರಣವಾಗಿದೆ. ವಾಹನವನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಗುಂಡಿಗೆ ಇಬ್ಬರು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯಗಳಿಂದ ಪಾರಾದರು. ಇಲ್ಲಿ ಸುರಕ್ಷತೆಯೇ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಿ ಅಪಾಯ, ಅಪಘಾತ ಉಂಟಾಗುವ ಸಾಧ್ಯತೆಗಳಿವೆ.

ಹೇಗಿದೆ ರಸ್ತೆ:

ಸರ್ವೀಸ್ ರಸ್ತೆಗೆ ಕಾಂಕ್ರೀಟ್ ಹಾಕುವ ಕಾರ್ಯ ಮೇಲ್ನೋಟಕ್ಕೆ ಪೂರ್ಣಗೊಂಡಿದೆ. ಅಲ್ಲಿ ವೇಗವಾಗಿ ವಾಹನಗಳು ಸಾಗುತ್ತಿವೆ. ಆದರೆ ಎಡ, ಬಲಗಳಲ್ಲಿ ಯಾವುದೇ ಸುರಕ್ಷಿತ ಜಾಗವಿಲ್ಲ. ಹೀಗಾಗಿ ನಡೆದುಕೊಂಡು ಹೋಗುವವರು ಮತ್ತು ದ್ವಿಚಕ್ರ ವಾಹನ ಸವಾರರು ಪರಿಪಾಟಲು ಪಡುವಂತಾಗಿದೆ. ಕೆಲವೆಡೆ ರಸ್ತೆ ಅಂಕುಡೊಂಕಾಗಿದ್ದು, ವಾಹನ ಚಾಲಕರೂ ಜಾಗ್ರತೆ ವಹಿಸುವ ಅಗತ್ಯವಿದೆ. ಅಂಗಡಿ, ಮುಂಗಟ್ಟುಗಳ ಎದುರು ವಾಹನ ನಿಲ್ಲಿಸುವ ಕಾರಣ ರಸ್ತೆ ಪ್ರಾಣಾಂತಕವಾಗಿ ಪರಿಣಮಿಸಿದೆ.

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ