ಯಕ್ಷಸೇವೆಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಶ್ರೀರಕ್ಷೆ: ಸುಬ್ರಾಯ ಹೊಳ್ಳ
ಕಲಾವಿದರಿಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಶ್ರೀರಕ್ಷೆ. ಕಾಸರಗೋಡಿನವನಾದ ನನಗೆ ಬಂಟ್ವಾಳ ತಾಲೂಕಿನ ಕಲಾಭಿಮಾನಿಗಳ ಅನನ್ಯ ಬೆಂಬಲ ದೊರಕಿದೆ. ಇದು ನನ್ನನ್ನು ಮತ್ತಷ್ಟು ಕಲಾಸೇವೆ ನಡೆಸಲು ಪ್ರೇರಣಾದಾಯಿಯಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಹೇಳಿದರು.
ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಜ.25ರಂದು ರಾತ್ರಿ ಯಕ್ಷಮಿತ್ರರು ಕೈಕಂಬ ವತಿಯಿಂದ ಸನ್ಮಾನ, ಗೌರವಾರ್ಪಣೆ ಸ್ವೀಕರಿಸಿ ಅವರು ಮಾತನಾಡಿದರು.
ಯಕ್ಷಗಾನ ಪ್ರೇಮಿ ಶ್ಯಾಮ ಭಟ್ಟ ಅವರು ತನ್ನ ಹಾಗೂ ಅನೇಕ ಯಕ್ಷಗಾನ ಕಲಾವಿದರಿಗೆ ಬೆಂಬಲವಾಗಿದ್ದಾರೆ ಎಂದು ಅವರು ಸ್ಮರಿಸಿದರು.
ಪತ್ರಕರ್ತ ಹರೀಶ ಮಾಂಬಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಯಕ್ಷಗಾನಕ್ಕೆ ಪ್ರೇಕ್ಷಕರ ಮತ್ತು ಕಲಾವಿದರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಮೇಳಗಳೂ ಹೆಚ್ಚಾಗಿವೆ. ಈ ಹಂತದಲ್ಲಿ ಕಲಾವಿದನನ್ನು ಪಾತ್ರವಾಗಿಯೇ ಕಾಣುವ ಪ್ರೇಕ್ಷಕ ಸಮುದಾಯ ಹಾಗೂ ರಂಗಸ್ಥಳದಲ್ಲಿ ಪಾತ್ರಗಳಿಗೆ ಜೀವ ತುಂಬುವ ಕಲಾವಿದರ ಸಂಖ್ಯೆ ಅಧಿಕವಾಗಲಿ ಎಂದು ಹಾರೈಸಿದರು.
ಈ ಸಂದರ್ಭ ರಂಗೋಲಿ ಹೋಟೆಲ್ ಮಾಲಕರಾದ ಸದಾನಂದ ಶೆಟ್ಟಿ ರಂಗೋಲಿ, ಪ್ರಮುಖರಾದ ಭಾಸ್ಕರ ಶೆಟ್ಟಿ ಗಾಂದೋಡಿ, ಭಾಸ್ಕರ ಶೆಟ್ಟಿ ಪರಾರಿಗುತ್ತು, ವಿಶ್ವನಾಥ ಕೈಕಂಬ, ಯಕ್ಷಮಿತ್ರರು ಬಳಗದ ಶಂಕರ ಶೆಟ್ಟಿ, ಭುಜಂಗ ಸಾಲಿಯಾನ್, ಸದಾಶಿವ ಕೈಕಂಬ, ಕಿಶೋರ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.