ಸಾಧಕರು

ವಿದ್ಯಾಕ್ಷೇತ್ರದ ಅಮೂಲ್ಯ ಆಸ್ತಿ ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ

ಜನವರಿ 27ರಂದು ಬಿ.ಸಿ.ರೋಡಿನಲ್ಲಿ ಸಾಧನಾ ಸಂಭ್ರಮ

ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ರಮೇಶ ನಾಯಕ್ ರಾಯಿ ಅವರು ಇತ್ತೀಚೆಗೆ ಸೇವೆಯಿಂದ ನಿವೃತ್ತಿಗೊಂಡಿದ್ದು ಅವರ ಬಹುಮುಖಿ ಸಾಧನೆಯನ್ನು ಗುರುತಿಸಿ ಗೌರವಿಸುವ ಉದ್ಧೇಶದಿಂದ ಜನವರಿ 27ರಂದು ಅಪರಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ “ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ ಸಾಧನಾ ಸಂಭ್ರಮ” ಸಮಾರಂಭವನ್ನು ಆಯೋಜಿಸಲಾಗಿದೆ.

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ನಾಯಕರನ್ನು ಆ ಸಂದರ್ಭದಲ್ಲಿ “ರಮೇಶ ನಾಯಕ್ ಅಭಿನಂದನಾ ಸಮಿತಿ” ವತಿಯಿಂದ ಸಾರ್ವಜನಿಕ ಅಭಿನಂದನೆ ಸಲ್ಲಿಸಿ, ನಾಯಕರ ಬದುಕು-ಸಾಧನೆಗಳನ್ನು ಒಳಗೊಂಡ ವಿದ್ಯಾರತ್ನ ಅಭಿನಂದನಾ ಗ್ರಂಥ ಸಮರ್ಪಿಸಿ, ವಿದ್ಯಾರತ್ನ ಬಿರುದು ಪ್ರದಾನ ಮಾಡಿ ಗೌರವಿಸಲಾಗಿತ್ತು. ಇದೀಗ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘ ಹಾಗೂ “ರಮೇಶ ನಾಯಕ್ ಸಾಧನಾ ಸಂಭ್ರಮ ಸಮಿತಿ” ಸಹಭಾಗಿತ್ವದಲ್ಲಿ “ಸಾಧನಾ ಸಂಭ್ರಮ” ಸಮಾರಂಭವನ್ನು ಆಯೋಜಿಸಲಾಗಿದ್ದು ಈ ಮೂಲಕ ನಾಯಕರ ಶೈಕ್ಷಣಿಕ, ಸಹಕಾರಿ ಮತ್ತು ಸಾಮಾಜಿಕ ಬದುಕಿನ ಸಾಧನೆಯನ್ನು ತೆರೆದಿಡಲು ಪ್ರಯತ್ನಿಸಲಾಗಿದೆ.

ಸಮಾರಂಭವನ್ನು ರಾಜ್ಯ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ರಾವ್ ಕುಕ್ಕಾಜೆ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಪಂಚಾಯತು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಲೂಕು ಪಂಚಾಯತು ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಕೆದ್ದಳಿಕೆ ಶಾಲಾ ಗೌರವಾಧ್ಯಕ್ಷ ಬಿ.ಪದ್ಮಶೇಖರ ಜೈನ್, ತಹಶೀಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅತಿಥಿಗಳಾಗಿ ಭಾಗವಹಿಸುವರು. “ರಮೇಶ ನಾಯಕ್ ಮತ್ತು ಶಿಕ್ಷಣ” ವಿಷಯದಲ್ಲಿ ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, “ರಮೇಶ ನಾಯಕ್ ಮತ್ತು ಸಾಮಾಜಿಕ ಜೀವನ” ವಿಷಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಪತ್ರಕರ್ತ ಎ.ಗೋಪಾಲ ಅಂಚನ್ ವಿಷಯ ಮಂಡಿಸುವರು. ಸಮಾರಂಭದಲ್ಲಿ ರಮೇಶ ನಾಯಕ್ ಅವರಿಗೆ ಸಾರ್ವಜನಿಕ ಸನ್ಮಾನ, ಸಾಕ್ಷ್ಯ ಚಿತ್ರ ಪ್ರದರ್ಶನದ ಮೂಲಕ ಸಾಧನೆಯ ಅವಲೋಕನ ಹಾಗೂ ರಮೇಶ ನಾಯಕ್ ಅವರ ಗುರು ಚಂದ್ರಶೇಖರ ರಾವ್ ಕುಕ್ಕಾಜೆ ಅವರಿಗೆ ಗುರುವಂದನೆ ನಡೆಯಲಿದೆ.

ನಾಯಕರ ಆರಂಭದ ಹೆಜ್ಜೆಗಳು:
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಕರ್ಪೆ ಗ್ರಾಮದ ಕಿನ್ನಾಜೆ ನಿವಾಸಿಗಳಾದ ದಿ.ಅನಂತ ಛತ್ರ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರರಾದ ರಮೇಶ ನಾಯಕ್ ಅವರು ಕರ್ಪೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿರಿಯ ಪ್ರಾಥಮಿಕ, ಸಿದ್ಧಕಟ್ಟೆ ಸೈಂಟ್ ಫೆಡ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ, ಉಜಿರೆ ಎಸ್.ಡಿ.ಎಂ ಪ್ರ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ವಿರಾಜಪೇಟೆ ಸರ್ವೋದಯ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣವನ್ನು ಪೂರೈಸಿದವರು.

1980ರಲ್ಲಿ ಪುತ್ತೂರು ತಾಲೂಕಿನ ತೀರಾ ಗ್ರಾಮೀಣ ಪ್ರದೇಶದ ಕೆರ್ಮಾಯಿ ಶಾಲೆಯಲ್ಲಿ ಶಿಕ್ಷಕ ಸೇವೆಯನ್ನು ಆರಂಭಿಸಿದ ನಾಯಕರು, ಐದು ವರ್ಷಗಳ ಕಾಲ ತನ್ನದಲ್ಲದ ಊರಿನಲ್ಲಿ ಶಿಕ್ಷಣ ಪ್ರೇಮಿಯೊಬ್ಬರ ಮನೆಯಲ್ಲಿದ್ದು ನಿತ್ಯ 12 ಮೈಲುಗಳ ಕಾಡಿನ ಕಾಲನಡಿಗೆಯಲ್ಲಿ ಸಂಚರಿಸಿ ವೃತ್ತಿಯನ್ನು ಪೂರೈಸಿದವರು. ನಂತರ 1985ರಿಂದ 2006ರತನಕ ತನ್ನದೇ ಊರಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಶಾಲೆಯನ್ನು ರಾಜ್ಯಕ್ಕೆ ಮಾದರಿಯಾಗಿಸಿ ರೂಪಿಸಿದ ನಾಯಕರು 2006ರಿಂದ 09 ರತನಕ ಚೆನ್ನೈತ್ತೋಡಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿಯೂ ಯಶಸ್ವಿ ಕರ್ತವ್ಯ ನಿರ್ವಹಿಸಿದರು.

2009ರಿಂದ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಆರಂಭಿಸಿದ ನಾಯಕರು ಇಲ್ಲಿನ ಶಿಕ್ಷಕವೃಂದ, ಪೋಷಕವೃಂದ, ವಿದ್ಯಾರ್ಥಿವೃಂದ, ಶಾಲಾಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿ, ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದೊಂದಿಗೆ ಶಾಲೆಯಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಟಾನಗೊಳಿಸಿ ಶಾಲೆಯನ್ನು ರಾಷ್ಟ್ರಕ್ಕೆ ಮಾದರಿಯಾಗಿ ರೂಪಿಸುವಲ್ಲಿ ಯಶಸ್ವಿಯಾದವರು.

ಕೆದ್ದಳಿಕೆ ಶಾಲೆಯ ಸುತ್ತ ಒಂದು ಸುತ್ತು:
ಕಾವಳಮೂಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ತೀರಾ ಗ್ರಾಮೀಣ ಪ್ರದೇಶವಾದ ‘ಕೆದ್ದಳಿಕೆ’ ಎಂಬ ಹಚ್ಚ ಹಸಿರ ಸುಂದರ ಪರಿಸರದಲ್ಲಿ, ಸಕಲ ಮೂಲಭೂತ ಸೌಕರ್ಯಗಳುಳ್ಳ ಸುಸಜ್ಜಿತವಾದ ಸುಂದರ ಕಟ್ಟಡದಲ್ಲಿ, ವೈವಿಧ್ಯಮಯ ಚಿತ್ರ ಚಿತ್ತಾರಗಳುಳ್ಳ ಆಕರ್ಷಣೀಯ ವಾತಾವರಣದಲ್ಲಿ ಕಂಗೊಳಿಸುವ ಈ ಶಾಲೆ ವಿದ್ಯಾಭಿಮಾನಿಗಳ ಪಾಲಿಗೆ ನಿಜಕ್ಕೂ ದೇವಾಲಯ. ಅಧಿಕಾರಿಗಳಿಗೆ, ಅಧ್ಯಯನ ಶೀಲರಿಗೆ ಆಸಕ್ತಿಯ ಶೈಕ್ಷಣಿಕ ಕೇಂದ್ರ. ಮಕ್ಕಳಿಗಂತೂ ನೆಚ್ಚಿನ, ಅಚ್ಚುಮೆಚ್ಚಿನ ಕಲಿಕಾ ತಾಣ. ಎಲ್ಲಾ ಬಗೆಯಲ್ಲೂ ಮಾದರಿ ಶಾಲೆಯೆಂದು ಗುರುತಿಸಿಕೊಂಡಿರುವ ಈ ಶಾಲೆ ಪಾಠ, ಆಟ, ಪಠ್ಯೇತರ ಚಟುವಟಿಕೆಗಳೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ಪ್ರಗತಿಗೆ ಒತ್ತು ನೀಡಿದ್ದು ಮಕ್ಕಳು ‘ಎಲ್ಲದರಲ್ಲೂ ಮುಂದು’ ಎಂಬುದು ಇಲ್ಲಿನ ಮಕ್ಕಳ ಹಿರಿಮೆ. ಈ ಶಾಲೆಯಲ್ಲಿ ನಡೆಯುವ ಯಾವುದೇ ಕಾರ್‍ಯಕ್ರಮದಲ್ಲಿಯೂ ನೂರು ಶೇಖಡಾ ಪೋಷಕರ ಸಕ್ರೀಯವಾಗಿ ಭಾಗವಹಿಸುವಿಕೆ, ಶಾಲಾಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ., ಪೋಷಕ ವಲಯ ಹಾಗೂ ಶಿಕ್ಷಕ ವಲಯದ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯಿಂದ ಈ ಶಾಲೆ ಸರಕಾರಿ ಶಾಲೆ ಎನಿಸದೇ ನಿಜಾರ್ಥದಲ್ಲಿ ಸಮುದಾಯದ ಶಾಲೆಯಾಗಿದ್ದು ಎಲ್ಲರೊಂದಿಗೂ ನಾಯಕರ ಆತ್ಮೀಯ ಒಡನಾಟ, ವಿಶ್ವಾಸ, ಕಾರ್‍ಯದಕ್ಷತೆ, ಸಂಘಟನಾ ಚತುರತೆ, ನಾಯಕತ್ವದ ಗುಣಗಳಿಂದ ಎಲ್ಲರೂ ಶಾಲೆಗಾಗಿ ಮುಕ್ತವಾಗಿ ಸೇವೆ ಸಲ್ಲಿಸುವ ವಾತಾವರಣ ನಿರ್ಮಾಣಗೊಂಡು ಶಾಲೆ ಮಾದರಿಯಾಗಿ ರೂಪುಗೊಳ್ಳುವಂತಾಗಿದೆ. ರಾಷ್ಟ್ರ, ರಾಜ್ಯ ಮಟ್ಟದ ಶೈಕ್ಷಣಿಕ ಅಧ್ಯಯನ ತಂಡಗಳು ಈ ಶಾಲೆಗೆ ಬೇಟಿ ನೀಡಿ ಶಾಲಾ ಸಾಧನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ ಅಂಶವಾಗಿದೆ.

ಕೆದ್ದಳಿಕೆ ಶಾಲೆಯಲ್ಲಿ ನಡೆದ ಹೊಸ ಪ್ರಯೋಗಗಳೆಲ್ಲವೂ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವುಗಳು. ಮಕ್ಕಳಿಗಾಗಿ ನಿರಂತರ ಕ್ರಿಯಾಶೀಲ ಚಟುವಟಿಕೆಗಳು, ಸಮುದಾಯಕ್ಕಾಗಿ ಹಲವಾರು ಜನೋಪಯೋಗಿ ಕಾರ್‍ಯಕ್ರಮಗಳು, ಮಕ್ಕಳ ಸಾಹಿತ್ಯ ಸಮ್ಮೇಳನ, ನಲಿಕಲಿ ಉತ್ಸವ, ಮಕ್ಕಳ ಕಲಾ ತಂಡದ ಮೂಲಕ ಜಿಲ್ಲೆಯ ವಿವಿದೆಡೆ ಜಾಗೃತಿ ಕಾರ್‍ಯಕ್ರಮಗಳ ಪ್ರದರ್ಶನ, ಮಕ್ಕಳ ದಿಬ್ಬಣ/ ಶಾಲಾ ಆಯನ/ ಶಾಲೆಗಾಗಿ ಪೋಷಕರ ಹೊರೆಕಾಣಿಕೆ/ ಮಗುವಿಗೊಂದು ಗಿಡ-ಮನೆಗೊಂದು ಮರ/ ಕೆದ್ದಳಿಕೆ ಉತ್ಸವ ಮೊದಲಾದ ಹೆಸರಿನಲ್ಲಿ ಶಾಲಾ ಪ್ರಾರಂಭೋತ್ಸವದ ಆಯೋಜನೆ, ಪರಿಸರ ಸಡಗರ ಹೆಸರಿನಲ್ಲಿ ವಾರ್ಷಿಕೋತ್ಸವ ಮೊದಲಾದ ಕಾರ್‍ಯಕ್ರಮಗಳು ಕೆದ್ದಳಿಕೆ ಶಾಲೆಯ ಇತಿಹಾಸದಲ್ಲಿ ಮಾದರಿ ಮೈಲುಗಲ್ಲುಗಳು.

ಶಾಲೆಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಒಂದೊಂದು ಹಣ್ಣಿನ ಗಿಡ ನೆಟ್ಟಿರುವಿಕೆ, ರಾಜ್ಯಕ್ಕೆ ಮಾದರಿಯಾದ ಇಲ್ಲಿನ ಹಣ್ಣಿನ ತೋಟ, ಶಾಲಾಂಗಣದಲ್ಲಿ ಆಕರ್ಷನೀಯ ಹೂದೋಟ, ಬಿಸಿಯೂಟಕ್ಕೆ ಸಾಕಾಗಿ ಮೂರಾಟಕ್ಕೂ ಉಳಿಯುವಷ್ಟು ಕೊಡುವ ತರಕಾರಿ ತೋಟ, ತೆಂಗಿನ ತೋಟ, ಸೆಗಣಿ ಹಾಕಿ ಗುಡಿಸಿದ ಶಾಲಾ ಅಂಗಳ, ಇಂಗುಗುಂಡಿಗಳ ರಚನೆ, ಜಲಮರುಪೂರಣ ವ್ಯವಸ್ಥೆ, ಶಾಲೆಯ ಅಂಗಳದ ಒಂದು ಬದಿಯಲ್ಲಿ ರಚನೆಗೊಂಡ ಮುಕ್ತ ಕಲಿಕೆಯ ಸಿರಿದೊಂಪ ಚಪ್ಪರ, ಪ್ಲಾಸ್ಟಿಕ್ ಮುಕ್ತ ಶುಚಿತ್ವದ ವಾತಾವರಣ, ಅಂಗಳದಲ್ಲಿ ರೂಪುಗೊಂಡ ಹಚ್ಚಹಸಿರಿನ ವರ್ಣ ವೈವಿಧ್ಯದ ಟೋಪೊಗ್ರಾಪಿ, ಅಮೂಲ್ಯ ಗೋಡೆ ಬರಹಗಳು…ಇವೆಲ್ಲವೂ ಇಲ್ಲಿ ನೆಲ-ಜಲ-ಮನುಕುಲದ ಉಳಿವಿಗಾಗಿ ನಡೆಸಿದ ಅಮೋಘ ಸಾಹಸಗಳಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟವುಗಳು.

ಪ್ರಶಸ್ತಿಗಳ ಸರಮಾಲೆ:
೨೦೦೧-೦೨ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ೨೦೦೨-೦೩ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೪-೦೫ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೧-೧೨ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೩-೧೪ರಲ್ಲಿ ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೫ರಲ್ಲಿ ವಿದ್ಯಾರತ್ನ ಪ್ರಶಸ್ತಿ, ಅಕ್ಷರ ಗೌರವ ಪುರಸ್ಕಾರ, ವಜ್ರಾಕ್ಷ ಮಲ್ಲಿ ಸ್ಕೃತಿ ಗೌರವ ಪುರಸ್ಕೃತರಾದ ರಮೇಶ ನಾಯಕ್ ಅವರು ರಾಜ್ಯ, ಜಿಲ್ಲಾ ಮಟ್ಟದ ಹಲವಾರು ಸಂಘಟನೆಗಳಿಂದ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿರುವುದು ಅವರ ಸಾಧನಾಶೀಲತೆಯ ದ್ಯೋತಕ.

ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಅಲ್ಲಿನ ವಿಶೇಷ ಕಾರ್‍ಯ ಸಾಧನೆಗಾಗಿ ಜಿಲ್ಲಾ ಮಟ್ಟದ ಸ್ವಚ್ಚತಾ ಪ್ರಶಸ್ತಿ, ದಿವಾಕರ ದಾಸ್ ಕಾವಳಕಟ್ಟೆ ಅಧ್ಯಕ್ಷತೆಯ ಅವಧಿಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ, ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ, ಜಿಲ್ಲಾ ಮಟ್ಟದ ಮೆಟ್ರಿಕ್ ಮೇಳ ಪ್ರಶಸ್ತಿ, ಜಿಲ್ಲಾ ಮಟ್ಟದ ಟಿ.ಎಲ್.ಎಂ ಪ್ರಶಸ್ತಿ, ಪ್ರತಿಭಾ ಕಾರಂಜಿ-ಕ್ರೀಡಾಕೂಟದ ಪ್ರಶಸ್ತಿಗಳ ಸಹಿತ ಇಲ್ಲಿನ ಮಕ್ಕಳಿಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರೆತಿದೆ.

ನಾಯಕ್ ಅವರ ಸಾಮಾಜಿಕ/ಸಾಂಸಾರಿಕ ಬದುಕು:
ನಾಯಕ್ ಅವರ ಸಾಧನೆಯೂ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತವಾದದ್ದಲ್ಲ. ಕೃಷಿಕರಾಗಿ, ಜನೋಪಯೋಗಿ ಚಟುವಟಿಕೆಗಳ ಸಂಘಟಕರಾಗಿ, ತರಬೇತುದಾರರಾಗಿ, ವಿವಿಧ ಕಾರ್‍ಯಕ್ರಮಗಳ ಪೋಷಕರಾಗಿ ಸಾಮಾಜಿಕ ಪ್ರಗತಿಗೂ ತನ್ನದೇ ಆದ ಕೊಡುಗೆ ನೀಡುತ್ತಿರುವ ನಾಯಕ್, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘಕ್ಕೆ ಸ್ವಂತ ಕಟ್ಟಡ, ಶಾಖೆಗಳ ವಿಸ್ತರಣೆ ಸಹಿತ ಸಂಘದ ಸಮಗ್ರ ಅಭಿವೃದ್ಧಿಗೆ ನೀಡಿದ ಸೇವೆಯೂ ಗಮನಾರ್ಹವಾದುದು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಘಟಕದ ಪ್ರಧಾನ ಕಾರ್‍ಯದರ್ಶಿಯಾಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿಯಾಗಿ ಸರಕಾರಿ ನೌಕರರು ಮತ್ತು ಶಿಕ್ಷಕರ ಪರವಾಗಿನ ಹೋರಾಟದಲ್ಲಿ ಮಾರ್ಗದರ್ಶಕರಾಗಿ ಮುಂಚೂಣಿಯಲ್ಲಿದ್ದುಕೊಂಡು ಮುನ್ನಡೆಸಿದಲ್ಲದೆ ಸಂಘಟನೆಗಳ ಬಲವರ್ಧನೆಗೂ ಶ್ರಮಿಸಿದವರು. ರಾಯಿ ಕೊಡಮಣಿತ್ತಾಯ ಧೂಮವತಿ ಸೇವಾ ಸಮಿತಿಯ ಅಧ್ಯಕ್ಷ ಸಹಿತ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವವರು.

ಮಕ್ಕಳು, ಶಾಲೆ ಹಾಗೂ ಊರಿನ ಹಿತದೃಷ್ಟಿಯಿಂದ ನಾವು ಪ್ರಾಮಾಣಿಕವಾಗಿ ದುಡಿದರೆ ಸರಕಾರಿ ಶಾಲೆಗಳು ಮಾದರಿಯಾಗಿ ಬೆಳೆಯುತ್ತದೆ ಎನ್ನುವ ನಾಯಕರು ಬಂದದ್ದನ್ನು ಸವಾಲಾಗಿ ಸ್ವೀಕರಿಸುತ್ತಾ, ನಿರಂತರ ಹರಸಾಹಸ ಮಾಡುತ್ತಾ, ತನ್ನದೆಲ್ಲವನ್ನೂ ಅದಕ್ಕಾಗಿ ತ್ಯಾಗ ಮಾಡುತ್ತಾ, ಅದರಲ್ಲೇ ಬದುಕಿನ ಸಾರ್ಥಕತೆಯನ್ನು ಕಂಡವರು.

ಇವರಿಗೆ ಶಾಲೆಯೇ ದೇಗುಲ, ಅಲ್ಲಿನ ಮಕ್ಕಳೇ ದೇವರು. ಬೆಳಿಗ್ಗೆ ಏಳರಿಂದ ಸಂಜೆ ಏಳರ ವರೆಗೂ ಕೆಲವೊಮ್ಮೆ ಶಾಲಾ ಕೆಲಸದಲ್ಲಿಯೇ ಕಳೆಯುವ ನಾಯಕರು ರಜಾದಿನದಲ್ಲಿಯೂ ಶಾಲೆಯ ತೋಟದ ನಿರ್ವಹಣೆಯಲ್ಲಿ ತೊಡಗಿಸಿಕೊಂಡವರು. ಎಲ್ಲರೊಳಗೊಂದಾಗುವ ಸ್ನೇಹಶೀಲತೆ, ಕಷ್ಟಕ್ಕೆ ಕರಗುವ ಸಹೃದಯತೆ, ಎಲ್ಲರನ್ನೂ ಪ್ರೀತಿಸುವ ಮಾನವೀಯತೆ…ಇವೆಲ್ಲವೂ ನಾಯಕರ ವ್ಯಕ್ತಿತ್ವದ ಭೂಷಣಗಳು. ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ದಕ್ಷತೆ, ಬದುಕಿನಲ್ಲಿ ಬದ್ಧತೆ, ನಡೆ-ನುಡಿಯಲ್ಲಿ ಗಂಭೀರತೆ..ಇವೆಲ್ಲವೂ ನಾಯಕರ ಗೆಲುವಿನ ಹಾದಿಗೆ ಮೆಟ್ಟಿಲುಗಳು. ನಾಯಕ್ ಅವರು ತನ್ನ ಪತ್ನಿಯಾದ ಶ್ರೀಮತಿ ಭಾರತಿಯವರನ್ನು ಕೆಲವರ್ಷದ ಹಿಂದೆಯೇ ಕಳೆದುಕೊಂಡರೂ ತನ್ನ ವೈಯಕ್ತಿಕ ಬದುಕಿನ ನೋವನ್ನು ಶಾಲೆಯಲ್ಲಿ ಮಕ್ಕಳೊಂದಿಗೆ, ಸಮಾಜದಲ್ಲಿ ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ಕಳೆಯುತ್ತಾ ತನ್ನ ಇಡೀ ಬದುಕನ್ನು ಶಾಲೆಗಾಗಿ ಮುಡಿಪಾಗಿಡುತ್ತಾ ಮುನ್ನಡೆದವರು. ಕೆಲತಿಂಗಳ ಹಿಂದೆ ತನ್ನ ಏಕೈಕ ಪುತ್ರ ಕಾರ್ತಿಕ್‌ನ ಮದುವೆಯನ್ನು ದಿವ್ಯಳೊಂದಿಗೆ ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ನಡೆಸಿ ಸಂಭ್ರವಿಸಿದ ನಾಯಕರು ಪ್ರಸ್ತುತ ತನ್ನ ರಾಯಿಯ ಮನೆಯಲ್ಲಿ ವಾಸವಾಗಿದ್ದು 2009ರಿಂದ ಇದುವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆದ್ದಳಿಕೆಯಲ್ಲಿ ಸೇವೆ ಸಲ್ಲಿಸಿ ಡಿಸೆಂಬರ್ 31ಕ್ಕೆ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರವೂ ಶಾಲೆಯಲ್ಲಿ ಬಾಕಿ ಉಳಿದಿರುವ ಕೆಲವು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಾಯಕರು ಸಕ್ರೀಯರಾಗಿ ತೊಡಗಿಸಿಕೊಂಡಿರುವುದು ಹೆಮ್ಮೆ ಪಡಬೇಕಾದ ವಿಚಾರವಾಗಿದೆ.

ಇಂತಹ ಬಹುಮುಖಿ ಸಾಧಕರನ್ನು ಗೌರವಿಸುವ “ಸಾಧನಾ ಸಂಭ್ರಮ”ಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು ಉಮಾನಾಥ ರೈ ಮೇರಾವು ಅಧ್ಯಕ್ಷರಾಗಿರುವ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘ, ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷರಾಗಿರುವ ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆ.ಮೋನಪ್ಪ ಉಪಾಧ್ಯಕ್ಷರಾಗಿರುವ ವಿಟ್ಲ ಅಧ್ಯಾಪಕರ ಸಹಕಾರಿ ಸಂಘ, ಟಿ.ಶೇಷಪ್ಪ ಮೂಲ್ಯ ಅಧ್ಯಕ್ಷ ಮತ್ತು ಎಚ್ಕೆ.ನಯನಾಡು ಸಂಚಾಲಕರಾಗಿರುವ ಸಾಧನಾ ಸಂಭ್ರಮ ಸಮಿತಿ ಮತ್ತು ನವೀನ್ ಪಿ.ಎಸ್, ಭಾರತಿ ಶೇಷಪ್ಪ, ಜಯರಾಮ್, ಜನಾರ್ಧನ್ ಜೆ, ಕೃಷ್ಣ ಪ್ರಕಾಶ್, ದಿವಾಕರ ದಾಸ್ ಕಾವಳಕಟ್ಟೆ, ನಾರಾಯಣ ಸಿ.ಪೆರ್ನೆ, ಚಂದ್ರಶೇಖರ ಪ್ರಭು, ಗಣೇಶ ನಾಯಕ್ ವಾಮದಪದವು ಮೊದಲಾದವರಿರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳ ತಂಡ ಕಾರ್‍ಯಕ್ರಮದ ಯಶಸ್ವಿಗಾಗಿ ತೊಡಗಿಸಿಕೊಂಡಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts