ಕಾಂಗ್ರೆಸ್ ಪಕ್ಷದ ನಾಯಕರೇ ನೀವು ಕೇವಲ ಬಾಯಲ್ಲಷ್ಟೇ ಸತ್ಯ, ಅಹಿಂಸೆ, ಅಭಿವೃದ್ಧಿ ವಿಚಾರಗಳನ್ನು ಹೇಳುತ್ತಾ ಹೋದಿರಿ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೀವು ಕೇವಲ ಭಾಷಣಗಳಲ್ಲಷ್ಟೇ ಹೇಳಿದ್ದನ್ನು ಮಾಡ್ತಾ ಇದ್ದೀವಿ. ಇದು ವಾಸ್ತವ ಸಂಗತಿ. ಕಾಂಗ್ರೆಸ್ ಕೇವಲ ಬಾಯಲ್ಲಷ್ಟೇ ಹೇಳಿಕೆ ನೀಡಿದರೆ, ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಮಾಜಿ ಸಂಸದೆ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಲೇವಡಿ ಮಾಡಿದರು.
ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಪರಿವರ್ತನೆಗಾಗಿ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಕಾರ್ಯಕರ್ತರ ರಕ್ಷಣೆ ನಾಯಕರ ಹೊಣೆಯಾಗಿದ್ದು, ಅವರ ಅಭಿಲಾಷೆಯಂತೆ ಕಾರ್ಯವೆಸಗಿದರೆ ಜಯ ನಿಶ್ಚಿತ. ಹಿಂದೆ ಕೆಜೆಪಿ ಸಹಿತ ಬೇರೆ ಬಾವುಟ ಹಿಡಿದು ಪಕ್ಷದ ನಾಯಕರು ಕೆಲಸ ಮಾಡಿದ ಕಾರಣ ಹಿನ್ನಡೆಯಾಗಿದ್ದು, ಪಕ್ಷವೀಗ ಸದೃಢವಾಗಿದೆ. ಬಲಿಷ್ಠ ನಾಯಕತ್ವದಡಿ ಬಿಜೆಪಿ ಜಯಗಳಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅವನತಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ತೇಜಸ್ವಿನಿ ವ್ಯಕ್ತಪಡಿಸಿದರು.
2013ರಿಂದ 17ವರೆಗೆ ಅಲ್ಪಸಂಖ್ಯಾತರ ಮೇಲೆ ಪ್ರಕರಣಗಳನ್ನು ಕೈಬಿಡುವಂತೆ ಪತ್ರ ಬರೆಯಲಾಗಿದೆ. ಅಲ್ಪಸಂಖ್ಯಾತ ತುಷ್ಟೀಕರಣ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದ್ದು, ಅದರದ್ದು ಅಧಿಕಾರದಾಹಿ ರಾಜಕಾರಣ ?:ಂದು ಆರೋಪಿಸಿದ ತೇಜಸ್ವಿನಿ, ಟಿಪ್ಪುವನ್ನು ನೆನಪಿಸಿದಷ್ಟು ಕಾರ್ಯಪ್ಪರನ್ನು ನೆನಪಿಸಿಲ್ಲ ಎಂದರು.
ಇದಕ್ಕೂ ಮೊದಲು ಮಾತನಾಡಿದ ಮುಖಂಡ ಹರಿಕೃಷ್ಣ ಬಂಟ್ವಾಳ್, ರಮಾನಾಥ ರೈ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದರು. ಬಂಟರು, ಬಿಲ್ಲವರು, ಮೊಗವೀರರು ಒಂದೇ ಕುಟುಂಬದ ಬಳ್ಳಿಗಳು ಎಂದ ಅವರು ರಾಜಕೀಯದಲ್ಲಿ ಜಾತಿ ನೋಡಬೇಡಿ ಎಂದು ಸಲಹೆ ನೀಡಿದರು. ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಯಾಕೆ ಕೋಮು ಗಲಭೆ ನಿಲ್ಲಿಸಲು ಸಾಧ್ಯವಾಗಲಿಲ್ಲ? ಎಂದು ಹರಿಕೃಷ್ಣ ಪ್ರಶ್ನಿಸಿದರು. ಬಿಜೆಪಿ ಜೋಳಿಗೆಯಲ್ಲಿ ಅಭಿವೃದ್ದಿ, ವಿಕಾಸ, ರಮಾನಾಥ ರೈಗಳ ಜೋಳಿಗೆಯಲ್ಲಿ ಕತ್ತರಿ, ತೆಂಗಿನಕಾಯಿ ಇರುತ್ತದೆ ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕ ಸತ್ಯಜಿತ್ ಸುರತ್ಕಲ್ ಮಾತನಾಡಿ, ಸರಣಿ ಹತ್ಯೆಗಳು ನಡೆದರೂ ಸಂಘಟನೆಗಳನ್ನು ಸರಕಾರ ನಿಷೇಧಿಸಿಲ್ಲ. ಬದಲಾಗಿ ಹಿಂದು ಸಂಘಟನೆ ನಿಷೇಧ ಕುರಿತು ಮಾತನಾಡುತ್ತಿದ್ದಾರೆ ಎಂದರು.
ನಾಯಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಯಾತ್ರೆಯ ಅನುಭವ ಹಂಚಿಕೊಂಡು, ಇಂದು ಬಂಟ್ವಾಳ ಕ್ಷೇತ್ರದಲ್ಲಿ ಪರಿವರ್ತನೆ ಅಗತ್ಯವಿದೆ ಎಂಬುದು ಪಾದಯಾತ್ರೆ ಸಂದರ್ಭ ಭೇಟಿಯಾದ ಜನರೇ ತಿಳಿಸಿದ್ದಾರೆ ಎಂದರು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪುರುಷ ಎನ್. ಸಾಲಿಯಾನ್ ಮಾತನಾಡಿದರು. ಪಕ್ಷ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಸಂಜೀವ ಮಠಂದೂರು, ಜಿ.ಆನಂದ, ಎ.ರುಕ್ಮಯ ಪೂಜಾರಿ, ಕ್ಯಾ.ಬೃಜೇಶ್ ಚೌಟ, ಸಂತೋಷ್ ಕುಮಾರ್ ರೈ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಸಂಧ್ಯಾ ವೆಂಕಟೇಶ್, ವಜ್ರನಾಥ ಕಲ್ಲಡ್ಕ, ಉಮಾನಾಥ ಕೋಟ್ಯಾನ್, ಮೋನಪ್ಪ ದೇವಸ್ಯ, ರಾಮದಾಸ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ಮೋನಪ್ಪ ದೇವಸ್ಯ ವಂದಿಸಿದರು. ದೇವಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತುಅವರ ನೇತ್ರತ್ವದ ಪಾದಯಾತ್ರೆಯು ಶುಕ್ರವಾರ ಬೆಳಿಗ್ಗೆ ಅಮ್ಟಾಡಿಯಿಂದ ಹೊರಟು ಬಂಟ್ವಾಳ ಬೈಪಾಸ್,ಜಕ್ರಿಬೆಟ್ಟು,ನಗರದ ಮೂಲಕ ನೆರೆವಿಮೋಚನೆ ರಸ್ತೆ ಮೂಲಕ ಬಿ.ಸಿ.ರೋಡಿಗೆ ತೆರಳಿ ಅಲ್ಲಿಂದ ವಾಪಾಸ್ಸಾಗಿ ಸಮಾರೋಪ ಸಮಾರಂಭದ ಕಲಾಮಂದಿರದಲ್ಲಿ ಸಂಪನ್ನಗೊಂಡಿತ್ತು
ಗೊಂಬೆ ಕುಣಿತ,ಚೆಂಡೆ ಪಾದಯಾತ್ರೆಗೆ ವಿಶೇಷ ಮೆರಗು ನೀಡಿತು.ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು,ಪಕ್ಷದ ಮುಖಂಡರು,ಹಿರಿಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.ಜ.೧೪ ರಂದು ರಾಯಿ ಗರುಡ ಮಹಾಂಕಾಳಿ ದೇವಳದ ವಠಾರದಿಂದ ಆರಂಭಗೊಂಡ ಪಾದಯಾತ್ರೆ 13 ದಿನಗಳ ಕಾಲ ಬಂಟ್ವಾಳ ಕ್ಷೇತ್ರದ 59 ಗ್ರಾಮಗಳಲ್ಲಿ ಸುಮಾರು 273 ಕಿಮೀ.ನಷ್ಟ ಕ್ರಮಿಸಿದೆ. ರಾಜೇಶ್ ನಾಯ್ಕ್ ಅವರು ಈ ಸಂದರ್ಭ ಗ್ರಾಮ ವಾಸ್ತವ್ಯದ ಮೂಲಕ ಜನರ ಆಹವಾಲುಗಳನ್ನು ಅಲಿಸಿದರು.