ಬಂಟ್ವಾಳನ್ಯೂಸ್ ವರದಿ
ಸ್ವಚ್ಛ ಭಾರತ–ನಿರ್ಮಲ ಬಂಟ್ವಾಳ ಅಭಿಯಾನದಡಿ ಬಂಟ್ವಾಳ ಪುರಸಭಾ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಜಾಥಾವು ಬಿ.ಮೂಡ ಗ್ರಾಮದ ಮೊಡಂಕಾಪುನಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜ್ ಬಳಿಯಿಂದ ಕೈಕಂಬ ಜಂಕ್ಷನ್ವರೆಗೆ ಗುರುವಾರ ನಡೆಯಿತು.
ರೋಟರಿ, ಜೇಸಿ, ಲಯನ್ಸ್ ಕ್ಲಬ್ ಸಹಿತ ನಾನಾ ಸಂಘ ಸಂಸ್ಥೆಗಳು ಜಾಥಾದಲ್ಲಿ ಪಾಲ್ಗೊಂಡು ಸ್ವಚ್ಛತೆಯ ಸಂದೇಶ ಸಾರಿದರು.
ಮೊಡಂಕಾಪು ಕಾಲೇಜಿನ ಪ್ರಾಂಶುಪಾಲೆ ಸುಪ್ರಿಯಾ ಎ.ಸಿ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛತೆಯ ಜಾಗೃತಿ ಮನೆ ಮನೆಗಳಲ್ಲಿ ಆಗಬೇಕು. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ನಮ್ಮ ಮನೆ, ವಠಾರ, ಗ್ರಾಮ ಸ್ವಚ್ಛತೆ ಆದ್ಯತೆ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರ ಸಹಕಾರ ಇದ್ದಾಗ ಮಾತ್ರ ಯಾವುದೇ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಸ್ವಚ್ಛತೆ ಕುರಿತಾದ ಪುರಸಭೆಯ ಯೋಜನೆಗಳಿಗೆ ಸರ್ವರು ಸಹಕಾರ ನೀಡುವಂತೆ ಸಲಹೆ ನೀಡಿದರು.
ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಇಕ್ಬಾಲ್ , ಜಗದೀಶ್ ಕುಂದರ್, ಲಯನ್ಸ್ನ ಅಧ್ಯಕ್ಷ ಜಗದೀಶ್ ಯಡಪಡಿತ್ತಾಯ, ದಾಮೋದರ್, ವಸಂತ ಬಾಳಿಗ, ರೋಟರಿ ಕ್ಲಬ್ನ ಅಧ್ಯಕ್ಷ ಸಂಜೀವ ಪೂಜಾರಿ, ಉಮೇಶ್ ನಿರ್ಮಲ್, ಜೆಸಿಐ ಅಧ್ಯಕ್ಷೆ ಸವಿತಾ ನಿರ್ಮಲ್, ಪಲ್ಲವಿ ಕಾರಂತ್, ಪುರಸಭೆಯ ಅಧಿಕಾರಿಗಳು ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪತ್ರಕರ್ತ ಮೌನೇಶ್ ವಿಶ್ವಕರ್ಮ ನೇತೃತ್ವದ “ಸಂಸಾರ” ಜೋಡುಮಾರ್ಗ ತಂಡದಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.
ಪುರಸಭೆ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಭಾಗ್ಯಶ್ರೀ, ವಿದ್ಯಾ ನಿರೂಪಿಸಿದರು.