ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು ಪೌರಾಣಿಕ ಜ್ಞಾನವನ್ನು ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆವಾಗಿದೆ. ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಎಡನೀರು ಮಠ ಕಾಸರಗೋಡು ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ ಮೆಲ್ಕಾರ್ ಪಾಣೆಮಂಗಳೂರಿನಲ್ಲಿ ಏರ್ಪಡಿಸಲಾದ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿ ಜಿಲ್ಲೆಯಲ್ಲಿ ಯಕ್ಷಗಾನ ಕೃಷಿಕರ ಮನರಂಜನೆಯ ಕಾರ್ಯಕ್ರಮವಾಗಿದ್ದು ಸಾಂಸ್ಕೃತಿಕವಾಗಿ ವಿಶೇಷ ಸ್ಥಾನ ಪಡೆದಿದ್ದು ತುಳುನಾಡಿನ ಹೆಮ್ಮೆಯ ಕಲೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ ಶುಭ ಹಾರೈಸಿದರು. ವೇದಮೂರ್ತಿ ವಿಷ್ಣುಮೂರ್ತಿ ಮಯ್ಯ ಕೊಳಕೆ ಸಜಿಪ ಇವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಯಕ್ಷಗಾನ ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಕಲಾವಿದ ಮಂಜು ವಿಟ್ಲ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ್ ವಂದಿಸಿದರು. ಬಳಿಕ ಚಂದ್ರಾವಳಿ-ವೀರಮಣಿ ಪ್ರಸಂಗವನ್ನು ಪ್ರದರ್ಶಿಸಲಾಯಿತು.
ಯಕ್ಷಗಾನ ಸಪ್ತಾಹದ ಅಂಗವಾಗಿ ಮೆಲ್ಕಾರಿನಲ್ಲಿ ಜ.೨೮ರವರೆಗೆ ಪ್ರತಿದಿನ ಸಂಜೆ 6.30ರಿಂದ 10.30ರ ವರೆಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
25ರಂದು ಪಂಚವಟಿ-ತರಣಿಸೇನಾ ಕಾಳಗ, 26ರಂದು ಶಾಪ-ವಿಶಾಪ. 27ರಂದು ಶಶಿಪ್ರಭಾ-ಘೋರಭೀಷಣ ಕಾಳಗ, 28ರಂದು ಶಾಂಭವಿ ವಿಲಾಸ ಪ್ರದರ್ಶನಗೊಳ್ಳಲಿದೆ.