ಬಂಟ್ವಾಳ

ಕಾಂಗ್ರೆಸ್ ನವರಿಗೇ ಗೆಲ್ಲುವ ಬಗ್ಗೆ ಅನುಮಾನ: ನಳಿನ್ ಕುಮಾರ್ ಕಟೀಲ್

www.bantwalnews.com


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಹೊಂದಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸೋಲನುಭವಿಸಲಿದೆ. ಅದರಲ್ಲಿ ಬಂಟ್ವಾಳ ಕ್ಷೇತ್ರ ಮೊದಲ ಪಟ್ಟಿಯಲ್ಲಿದೆ.
ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದು ಹೀಗೆ.

ಪರಿವರ್ತನೆಗಾಗಿ ಬಿಜೆಪಿ ನಡಿಗೆಯ ಆರನೇ ದಿನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಸಮೀಪ ಶುಕ್ರವಾರ ರಾತ್ರಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ವೇಣುಗೋಪಾಲ್ ಅವರೇ ಕಾಂಗ್ರೆಸ್ ಗೆಲ್ಲುವ ಕುರಿತು ಅನುಮಾನ ವ್ಯಕ್ತಪಡಿಸಿದ್ದನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ನವರಿಗೇ ದ.ಕ.ಜಿಲ್ಲೆಯಲ್ಲಿ ಸೋಲಿನ ಭೀತಿ ಇದೆ. ಮೇಲಿನ ಪಟ್ಟಿಯಲ್ಲಿರುವವರೇ ರಮಾನಾಥ ರೈ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ದ.ಕ.ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಯ ಶಾಸಕ ಅಂಗಾರ ಮಾಡಿದ ಅರ್ಧ ಕೆಲಸವನ್ನು ರೈ ಮಾಡಿಲ್ಲ. ಅಂಗಾರ ಅವರೂ ಸುದೀರ್ಘ ಕಾಲ ಶಾಸಕರಾದವರು. ಮಂತ್ರಿಯೂ ಆಗಿಲ್ಲ. ಆದರೆ ಜಿಲ್ಲೆಯಲ್ಲಿ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ. ದುರ್ಗಮ ಪ್ರದೇಶವಾದ ಸುಳ್ಯಕ್ಕೆ ಅಭಿವೃದ್ಧಿಯ ಕಾರ್ಯ ಮಾಡಿಸಿದ್ದಾರೆ. ಆದರೆ ರಮಾನಾಥ ರೈ ಅವರು ಕೇವಲ ತೆಂಗಿನಕಾಯಿ ಒಡೆದದ್ದು ಬಿಟ್ಟರೆ, ಕೇಂದ್ರದ ಯೋಜನೆಗಳನ್ನು ಹಿಂದಿನ ಬಿಜೆಪಿ ಸರಕಾರ ಅನುಷ್ಠಾನಿಸಿದ್ದನ್ನು ತಾನು ಮಾಡಿದ್ದು ಎನ್ನುತ್ತಿದ್ದಾರೆ.ಎಂದು ನಳಿನ್ ಲೇವಡಿ ಮಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 14 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿದೆ. ಬಿ.ಸಿ.ರೋಡಿನಿಂದ ಮುಕ್ಕದವರೆಗೆ ಆರುಪಥ ರಸ್ತೆ ಕಾಂಕ್ರೀಟ್ ಹಾಕಲು 924 ಕೋಟಿ ರೂಪಾಯಿಗೆ ಮಂಜೂರು ದೊರೆತಿದೆ. ಮುದ್ರಾ ಜನಧನ ಯೋಜನೆ ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಂಡಿದೆ ಎಂದು ನಳಿನ್ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ., ಇಂದು ರಾಜ್ಯ ಸರಕಾರ ದಿವಾಳಿಯಾಗಿದ್ದು, ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ. ಪತನದ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷವೇ ಇಬ್ಬಾಗವಾಗುತ್ತಿದೆ ಎಂದರು. ಕಾಂಗ್ರೆಸ್ ತೊಲಗಿದರೆ ಮಾತ್ರ ದ.ಕ.ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.ಕಾಂಗ್ರೆಸ್ ನಿಂದ ವಿಭಜನೆ ರಾಜಕೀಯ ನಡೆಯುತ್ತಿದೆ. ವಿಕಾಸದ ಆಧಾರದ ಮೇಲೆ ದೇಶ ಕಟ್ಟುವ ಕಾರ್ಯ ಆಗಬೇಕು ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ಜನರ ಬಳಿಗೆ ಬಿಜೆಪಿ ವತಿಯಿಂದ ಪರಿವರ್ತನೆಗಾಗಿ ತಾನು ಕಳೆದ ಆರು ದಿನಗಳಿಂದ ಪಾದಯಾತ್ರೆಯಲ್ಲಿ ತೊಡಗಿದ್ದು, ಜನರ ಅಭೂತಪೂರ್ವ ಬೆಂಬಲ ದೊರಕಿದೆ ಎಂದು ಹೇಳಿದ ಯಾತ್ರೆ ರೂವಾರಿ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಪಕ್ಷವನ್ನು ಗೆಲ್ಲಿಸುವಂತೆ ಕೋರಿದರು.

ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಬಿಜೆಪಿ ಮುಂಬಯಿ ದಕ್ಷಿಣ ಭಾರತ ಮೀರಾ ಬಾಯಿಂದರ್ ಕ್ಷೇತ್ರದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಮಾತನಾಡಿದರು. ಇದೇ ವೇಳೆ ತಿಮ್ಮಪ್ಪ ಪೂಜಾರಿ, ನವೀನ್ ನಾಯಕ್, ಪ್ರಶಾಂತ್ ಲೋಬೊ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭ ಹಿರಿಯ ನಾಯಕ ಸರಪಾಡಿ ಸುಬ್ಬಣ್ಣ ಶೆಟ್ಟಿ, ಪಕ್ಷ ಪ್ರಮುಖರಾದ ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ರಾಮಕೃಷ್ಣ ಮಯ್ಯ, ಶಶಿಕಾಂತ ಶೆಟ್ಟಿ ಆರ್ಮುಡಿ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ದಯಾನಂದ ಶೆಟ್ಟಿ ಮುನ್ನಲಾಯಿ, ಸಾಂತಪ್ಪ ಪೂಜಾರಿ ಹಠತಡ್ಕ, ಶಾಂತವೀರ ಪೂಜಾರಿ, ಪೂವಪ್ಲ ಕಡಮಾಜೆ, ಶಿವಪ್ಪ ಗೌಡ, ಧನಂಜಯ ಶೆಟ್ಟಿ, ಸುದರ್ಶನ್ ಬಜ, ಪುರುಷೋತ್ತಮ ಮಜಲು, ಸಂತೋಷ್ ಕುಮಾರ್ ಶೆಟ್ಟಿ, ಪ್ರೇಮಾ, ಧರಣೇಂದ್ರ ಜೈನ್, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಸದಾನಂದ ನಾವೂರ, ವಿಟ್ಠಲ ಶೆಟ್ಟಿ ಅಲ್ಲಿಪಾದೆ, ಸರಪಾಡಿ ಅಶೋಕ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾತ್ರಿ ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರ ಮನೆಯಲ್ಲಿ ರಾಜೇಶ್ ನಾಯಕ್ ವಾಸ್ತವ್ಯ ಹೂಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ