ಉಕ್ಕುಡ ದರ್ಬೆ ಯಲ್ಲಿ ನ ಪಿರ್ಯಾದಿ ಮನೆಗೆ ರಾತ್ರಿ ಸಮಯ ಬಂದು ಮನೆಯ ಹಿಂದಿನ ಬಾಗಿಲನ್ನು ಮುರಿದು ಅಡುಗೆ ಕೋಣೆಯಲ್ಲಿ ಅಕ್ಕಿಯ ಪಾತ್ರೆಯ ಒಳಗೆ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಆರೋಪಿ ಒಕ್ಕೆತ್ತೂರು ಸುರಂಬಡ್ಕ ನಿವಾಸಿ ಮಹಮ್ಮದ್ ಅಶ್ರಫ್ (29)ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
5ಲಕ್ಷ ಮೌಲ್ಯದ ಚಿನ್ನಾಭರಣ, 10 ಲಕ್ಷ ಮೌಲ್ಯದ ಹುಂಡೈ ವರ್ನಾ ಕಾರು, 50 ಸಾವಿರ ಮೌಲ್ಯದ ಮೋಟಾರ್ ಸೈಕಲ್, 30 ಸಾವಿರ ನಗದು ಹಣ ಸೇರಿ ಒಟ್ಟು 15 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ವಿ.ಜೆ., ಪೊಲೀಸ್ ಉಪಾಧೀಕ್ಷಕ ಶೀನಿವಾಸ ವಿ. ಎಸ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಎಂ. ಎಸ್ ನೇತೃತ್ವದಲ್ಲಿ ವಿಟ್ಲ ಠಾಣಾ ಉಪ ನಿರೀಕ್ಷಕ ನಾಗರಾಜ್ ಹೆಚ್. ಇ., ಪ್ರೋಬೆಷನರಿ ಪಿ.ಎಸ್.ಐ ಸೌಮ್ಯ, ಸಿಬ್ಬಂದಿಗಳಾದ ಜಯಕುಮಾರ್, ಬಾಲಕೃಷ್ಣ, ಗಿರೀಶ್, ಶ್ರೀಧರ, ರಮೇಶ್, ರಕ್ಷಿತ್, ಅಭಿಜಿತ್, ಲೋಕೇಶ, ಪ್ರವೀಣ್, ಜಗದೀಶ, ಸತೀಶ, ಬಿರೇಶ್, ಚಾಲಕರಾದ ರಘುರಾಮ, ವಿಜಯೇಶ್ವರ, ಗಣಕಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ತ್ ಕುಮಾರ್, ಹೋಂ ಗಾರ್ಡ್ ರಮೇಶ್ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಉಕ್ಕುಡ ದರ್ಬೆ ವಾಸಿ ಮಹಮ್ಮದ್ ಕೆ ಎಂಬವರ ಮನೆಯಲ್ಲಿ ಡಿ.6ರಂದು ರಾತ್ರಿ ಮನೆ ಮಂದಿ ಸಮಾರಂಭಕ್ಕೆ ಹೋಗಿದ್ದಾಗ ಮನೆಯ ಹಿಂದಿನ ಬಾಗಿಲನ್ನು ಒಡೆದು ಅಡಿಗೆ ಮನೆಯ ಅಕ್ಕಿ ಪಾತ್ರೆಯಲ್ಲಿ ಇಟ್ಟಿದ್ದ ಸುಮಾರು 10ಲಕ್ಷ ಮೌಲ್ಯದ 44 ಪವನ್ ಚಿನ್ನಭರಣಗಳನ್ನು ಕಳವು ಮಾಡಲಾಗಿದ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.