ಬದುಕು ಕೇವಲ ಜೀವನ ನಿರ್ವಹಣೆಗೆ ಸೀಮಿತವಾದುದಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಾಧನೆಯ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು. ವ್ಯಕ್ತಿತ್ವವು ಸಮಾಜಕ್ಕೆ ಪೂರಕವಾಗಿರಬೇಕು. ಆ ಮೂಲಕ ಮಾನವ ಸಮುದಾಯಕ್ಕೆ ಪ್ರತಿಯೊಬ್ಬನೂ ತನ್ನದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಕತಾರಿನ ತುಳುಕೂಟದ ಅಧ್ಯಕ್ಷರೂ, ಯಶಸ್ವಿ ಉದ್ಯಮಿಯೂ ಆದ ಶ್ರೀ ಎಂ ರವಿ ಶೆಟ್ಟಿ ಹೇಳಿದರು.
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವದ ಸಂಭ್ರಮಾವಸರದಲ್ಲಿ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇರಳದ ಕೊಚ್ಚಿನ್‌ನ ಪ್ರಾಧ್ಯಾಪಕರಾದ ಡಾ| ಎನ್ ಬಾಲಕೃಷ್ಣರವರು ಮಾತನಾಡಿ ಶಿಕ್ಷಣ ಸಂಸ್ಥೆಯೊಂದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ದೇಗುಲ. ವಿದ್ಯಾಲಯಗಳಲ್ಲಿರುವ ಶಿಕ್ಷಕ ವೃಂದವು ಅಂತಹ ವಿದ್ಯಾರ್ಥಿಗಳಿಗೆ ಮೂಲ ಪ್ರೇರಣೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಕರ್ತೃಗಳು ಶಿಕ್ಷಕರು. ಹಳ್ಳಿಯ ಪರಿಸರದ ವಿದ್ಯಾರ್ಥಿಯಾದ ನಾನು ಈ ಎತ್ತರಕ್ಕೆ ಬೆಳೆಯುವಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂಸ್ಥೆಯು ಕಾರಣ ಎಂದು ಹೇಳಿದರು.
ಶ್ರೀ ವೆಂಕಟರಮಣ ಸ್ವಾಮಿ ಕಾಲೇಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಮತ್ತು ವಿವಿಧ ಇಲಾಖೆಗಳ ಬೃಹತ್ ವಸ್ತುಪ್ರದರ್ಶನವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಹಲವಾರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪದವಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜಗದೀಶ್ ಹೊಳ್ಳ ಮತ್ತು ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವೇದಾನಂದ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ತುಕಾರಾಂ ಪೂಜಾರಿ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ| ಟಿ.ಕೆ ರವೀಂದ್ರನ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಝೀನಾ ಕುವೆಲ್ಲೊ ಮತ್ತು ಉಪನ್ಯಾಸಕಿಯಾದ ಶಾಲಿನಿ ಬಿ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಸುದರ್ಶನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಭರತ್ ಕುಮಾರ್, ಸಂಜಯ್ ಶೆಣೈ ಮತ್ತು ವಿಕಾಸ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ನಂತರ ಮಂಗಳೂರು ಮೆಲೋಡಿಯಸ್ ತಂಡದವರಿಂದ ಮತ್ತು ಕಾಲೇಜಿನ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.