ಬಿಜೆಪಿಯ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಕೇಳಿಬಂದ ಅಭಿಪ್ರಾಯ
ಮುಂಬರುವ ಚುನಾವಣೆಯಲ್ಲಿ ಪ್ರಣಾಳಿಕೆ ರೂಪಿಸುವ ಸಲುವಾಗಿ ಬಿಜೆಪಿ ನಾನಾ ರಂಗದ ಗಣ್ಯರ ಅಭಿಪ್ರಾಯ ಸಂಗ್ರಹಣೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಸಲಹೆ ಸ್ವೀಕಾರ ಸಮಾಲೋಚನಾ ಸಭೆ ಶುಕ್ರವಾರ ನಡೆಯಿತು.
ಹಿರಿಯ ನಾಯಕ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 14 ಮಂದಿ ನಾನಾ ರಂಗದಲ್ಲಿ ದುಡಿಯುವವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರೆ, ಸಭಿಕರು ಚೀಟಿಯಲ್ಲಿ ಬರೆದ ಅಭಿಪ್ರಾಯಗಳನ್ನು ಸಮಿತಿಗೆ ಒಪ್ಪಿಸಿದರು.
ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಮಟ್ಟದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಂಗಾರಡ್ಕ ವಿಶ್ವೇಶ್ವರ ಭಟ್, ಭಾರತೀಯ ಜನತಾ ಪಾರ್ಟಿಯ ಕುರಿತು ದ.ಕ. ಜನತೆ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಪಕ್ಷ ಸೋತಾಗ ಕಣ್ಣೀರಿಟ್ಟ ಹಿರಿಯರೂ ಇದ್ದಾರೆ. ಪಕ್ಷ ಇಂದು ಬೆಳೆದುನಿಲ್ಲಲು ಕಾರ್ಯಕರ್ತರ ಹಾಗೂ ಹಿತೈಷಿಗಳ ಹಾರೈಕೆಯೇ ಕಾರಣ ಎಂದರು.
ಪಕ್ಷ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಪ್ರಣಾಳಿಕೆ ಸಮಿತಿ ಸಹಅಧ್ಯಕ್ಷ ಮಂಗಳೂರು ಮಾಜಿ ಮೇಯರ್ ಶಂಕರ ಭಟ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಚಂದ್ರಹಾಸ ಉಳ್ಳಾಲ್, ಬಂಟ್ವಾಳ ಪ್ರಣಾಳಿಕಾ ಸಮಿತಿ ಪ್ರಮುಖ ದೇವಪ್ಪ ಪೂಜಾರಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ಸಹಿತ ಪಕ್ಷ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೋನಪ್ಪ ದೇವಸ್ಯ ಮತ್ತು ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ದಿನೇಶ್ ಪೈ, ಡಾ. ಪ್ರತಿಭಾ ರೈ, ಎ.ರುಕ್ಮಯ ಪೂಜಾರಿ, ದಿನಕರ್, ಸಂಜೀವ ಅಮೀನ್, ಬಿ.ಟಿ.ನಾರಾಯಣ ಭಟ್, ರಾಜಾರಾಮ ಕಡೂರು, ಸದಾನಂದ ಗೌಡ, ಗೋಪಾಲ ಬಂಟ್ವಾಳ, ಶಶಿಧರ ರೈ ಅರಳ, ಚಂದ್ರಹಾಸ ರೈ, ಪುಷ್ಪರಾಜ ಶೆಟ್ಟಿ, ರಾಮಪ್ರಸಾದ್, ಯತೀನ್ ಕುಮಾರ್ ಅಭಿಪ್ರಾಯ ಮಂಡಿಸಿದರು.
ಪ್ರಧಾನಮಂತ್ರಿ ಪ್ರಕಟಿಸಿದ ಯೋಜನೆಗಳ ಮಾಹಿತಿ ಸ್ಪಷ್ಟವಾಗಿ ಬ್ಯಾಂಕುಗಳಲ್ಲಿ ದೊರಕುತ್ತಿಲ್ಲ. ಇವು ಸರಳರೂಪದಲ್ಲಿ ಜನರಿಗೆ ದೊರಕಬೇಕು. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಬೇಕು. ಡ್ರಗ್ ಮಾಫಿಯಾ ತಡೆಗಟ್ಟಲು ಕಾನೂನು ಬಲಗೊಳಿಸಬೇಕು. ಮರಳುಗಾರಿಕೆ ನೀತಿ ಜಾರಿಯಾಗಬೇಕು. ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ವಿಫುಲ ಅವಕಾಶಗಳಿವೆ ಅದರ ಕುರಿತು ಗಮನ ಹರಿಸಬೇಕು. ಮೀಸಲಾತಿ ದುರುಪಯೋಗ ಬೇಡ. ಜನಮರುಳು ಕಾನೂನು ಬೇಡ, ಸವಲತ್ತುಗಳನ್ನು ಒದಗಿಸುವಲ್ಲಿ ತಾರತಮ್ಯ ಬೇಡ, ಕೃಷಿಯ ಉತ್ಪನ್ನ ಮಾರಾಟಕ್ಕೆ ಪ್ರೋತ್ಸಾಹಕ್ಕೆ ವಾರದ ಸಂತೆ ಬೇಕು, ಜಮೀನು ಖರೀದಿ ಸಂದರ್ಭ ನೋಂದಣಿ ಹೊರೆ ಇಳಿಸಿ, ಹಿರಿಯ ನಾಗರಿಕರಿಗೆ ಅಭಯಾಶ್ರಮ ನಿರ್ಮಾಣ ಮಾಡಿ ಎಂಬ ಸಲಹೆಗಳು ಬಂದರೆ, ಹಿಂದು ದೇವಳ ಆದಾಯ ಹಿಂದು ಸಮಾಜಕ್ಕೆ ಸೀಮಿತವಾಗಲಿ ಎಂಬ ಒತ್ತಾಯ ಕೇಳಿಬಂತು.
ವಕೀಲರ ಫೀಸ್, ಡಾಕ್ಟರ್ ಫೀಸ್ ಗೆ ಆಧಾರ್ ನೋಂದಣಿ ಆಗಲಿ ಎಂಬ ಹಕ್ಕೊತ್ತಾಯ ಮಂಡನೆಯಾದರೆ, ಧಾರ್ಮಿಕ ಶಿಕ್ಷಣ ನೀತಿ ಜಾರಿಯಾಗಲಿ, ತಾಲೂಕಿಗೆ ಮಹಿಳೆಯರ ಕಾಲೇಜು ಬೇಕು ಎಂಬ ಮನವಿ ಬಂದವು. ಚೈನೀಸ್ ಮಾಡೆಲ್ ಆರು ಸಾವಿರಕ್ಕೆ ಸಿಗುತ್ತದೆ. ಸಬ್ಸಿಡಿ ಎಂಬುದು ರೈತರ ಉಪಕಾರಕ್ಕಾಗಿ ಇರಲಿ, ರೈತರ ವೈದ್ಯವೆಚ್ಚ ಸರಕಾರ ನೀಡಲಿ ಎಂಬ ರೈತಪರ ಮನವಿ ಬಂದವು.
ಗ್ರಾಮೀಣ ಜನರಿಗೆ ರಾಷ್ತ್ರೀಕೃತ ಬ್ಯಾಂಕ್ ಹೊರೆಯಾಗುತ್ತಿದೆ, ಸಾಲಗಳ ಸರಳೀಕರಣವಾಗಬೇಕು ಎಂಬ ಒತ್ತಾಯ ಕೇಳಿಬಂದರೆ, ತುಂಬೆಯಿಂದ ಮಣಿಹಳ್ಳವರೆಗೆ ಲಿಂಕ್ ರಸ್ತೆ ಆಗಬೇಕು ಎಂಬ ಸಲಹೆ ದೊರಕಿತು. ರಾಜಕೀಯ ಕ್ಷೇತ್ರಕ್ಕೆ ಶೇ.೫೦ ಯುವಜನರೇ ಇರಬೇಕು. ಅದಕ್ಕಾಗಿ ಮೀಸಲಾತಿ ಬೇಕು ಎಂಬ ಧ್ವನಿ ಕೇಳಿಬಂದರೆ, ನಗರಕ್ಕೆ ವಲಸೆ ಹೋಗುವುದನ್ನು ತಡೆಯಲು ಯುವಕರನ್ನು ಹಳ್ಳಿಯತ್ತ ಆಕರ್ಷಿಸುವ ಯೋಜನೆ ರೂಪಿಸಬೇಕು, ಜಾತಿ, ಜಾತಿ ಬೇಡ, ಬಡವರ್ಗ, ಶ್ರೀಮಂತ ವರ್ಗ ಎಂದಷ್ಟೇ ಇರಲಿ ಎಂಬ ಮಾತು ಬಂತು.
ಕರ್ನಾಟಕದಲ್ಲಿ ಜನಪ್ರನಿಧಿಗಳು ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ ಎಂಬ ಖಡಕ್ ನುಡಿ ಬಂದರೆ, ಕೃಷಿಗೆ ವಿಶೇಷವಾಗಿ ಅಡಕೆ ಸರಿಯಾದ ನೀತಿ ರೂಪಿಸಿ, ಚಿಕ್ಕ ರೈತರಿಗೆ ಲಾಭ ದೊರಕಿಸಿ ಎಂಬ ಸೂಚನೆ ಬಂದವು.