ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹೂಳು ತುಂಬಿ ಉಪಯೋಗಕ್ಕೇ ಬಾರದಿರುವ ಮೂರು ಕೆರೆಗಳನ್ನು ನಗರ ಯೋಜನ ಪ್ರಾಧಿಕಾರ ಮೂಲಕ ಗುರುತಿಸಿ ಪುನಶ್ಚೇತನಗೊಳಿಸಲಾಗುವುದು.
ಇದಕ್ಕೆ 2 ಕೋಟಿ ರೂ ವೆಚ್ಚವಾಗಲಿದ್ದು, ನಗರ ಯೋಜನಾ ಪ್ರಾಧಿಕಾರದ ಕೆರೆ ಅಬಿವೃದ್ಧಿ ನಿಧಿಯ ಮೂಲಕ ಸಣ್ಣ ನೀರಾವರಿ ಇಲಾಖೆಯಿಂದ ಸ್ಥಳ ಪರಿಶೀಲನೆ ಮಾಡಿ ಅಂದಾಜುಪಟ್ಟಿ ತಯಾರಿಸಲಾಗಿದೆ.
ಪುರಸಭಾ ವ್ಯಾಪ್ತಿಯ ಬಿ ಕಸ್ಬಾ ಗ್ರಾಮದ ಗಿರಿಗುಡ್ಡೆಯಲ್ಲಿ 2 ಎಕರೆ ಜಮಿನಿನಲ್ಲಿರುವ ಕೆರೆ, ಪಾಣೆಮಂಗಳುರು ಗ್ರಾಮದ ಕೌಡೇಲು ವಿನಲ್ಲಿ 18 ಸೆಂಟ್ಸ್ ಮತ್ತು ಪಾಣೆಮಂಗಳೂರು ಗ್ರಾಮದ ನರಹರಿ ಸಮೀಪದ ನರಹರಿ ನಗರದಲ್ಲಿ ೪೦ಸೆಂಟ್ಸ್ ಜಾಗದಲ್ಲಿ ಪಾಳು ಬಿದ್ದ ಸ್ಥಿತಿಯಲ್ಲರುವ ಒಟ್ಟು ಮೂರು ಕೆರಗಳು ಅಭಿವೃದ್ಧಿ ನಿರೀಕ್ಷೆಯಲ್ಲಿರುವ ಕೆರೆಗಳು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಸದಾಶಿವ ಬಂಗೇರ ತಿಳಿಸಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 14 ಕೆರೆಗಳು ಹೂಳು ತುಂಬಿದ ಸ್ಥಿತಿಯಲ್ಲಿದ್ದು , ಈಗಾಗಲೇ ನಗರ ಯೋಜನಾ ಪ್ರಾಧಿಕಾರ ಕೆರೆ ಉಳಿಸಿ ನೀರು ಸಂರಕ್ಷಣೆ ಎನ್ನುವ ಯೋಜನೆಯ ಕೈಗೊಂಡಿದೆ.
ಪ್ರಥಮ ಹಂತದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯ ಮೂರು ಕೆರೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸ್ಥಳ ಪರಿಶೀಲನೆ ಮಾಡಲಾಗಿದ್ದು , ಅಂದಾಜು ಪಟ್ಟಿ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಎಲ್ಲಾ ಕೆರಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಸದಾಶಿವ ಬಂಗೇರ ಮಾಹಿತಿ ನೀಡಿದ್ದಾರೆ. ಪ್ರಾಣಿ, ಪಕ್ಷಿ ಮತ್ತು ಕೃಷಿಗೆ ಇದರಿಂದ ಹೆಚ್ಚು ಪ್ರಯೋಜನವಾಗುತ್ತದೆ ಎನ್ನುವ ಉದ್ದೇಶದಿಂದ ಕೆರೆಗಳನ್ನು ಉಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಹೂಳೆತ್ತುವ ಪ್ರದೇಶಗಳಿಗೆ ಬಂಗೇರ ಭೇಟಿ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಸನ್ನ, ನಗರ ಪ್ರಾಧಿಕಾರದ ಸದಸ್ಯ ಕಾರ್‍ಯದರ್ಶಿ ಅಭಿಲಾಷ್ ಎಮ್.ಪಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಹಮ್ಮದ್ ಬಾವ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಸ್ಥಳಿಯರಾದ ಮಹೇಶ್ ಗಟ್ಟಿ, ಜಗದೀಶ್, ಮೋಹನ್ ಸಾಲ್ಯಾನ್, ಕಿಶನ್, ಗಣೇಶ್ , ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.