ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಟ್ವೇಕಾಂಡೋ ಕ್ರೀಡಾಕೂಟದಲ್ಲಿ ಬಂಟ್ವಾಳ ತೌಹೀದ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿಧ್ಯಾರ್ಥಿ ರೈಫಾನ್ ಅಹಮದ್ 2 ಚಿನ್ನದ ಪದಕ ಗಳಿಸಿದ್ದಾನೆ.
ಬೆಂಗಳೂರಿನ ಮಲ್ಲೇಶ್ವರಂ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಒಲಿಂಪಿಕ್ ಮಾರ್ಷಲ್ ಆರ್ಟ್ ಟ್ವೇಕಾಂಡೋ ಕ್ರೀಡೆಯಲ್ಲಿ 36 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ರೈಫಾನ್, ಅತ್ಯುತ್ತಮ ಪ್ರದರ್ಶನ ನೀಡಿ ಎದುರಾಳಿಯೊಂದಿಗೆ ಸೆಣಸಾಟ ನಡೆಸಿ ವಿಜೇತನಾಗಿದ್ದು, ಎರಡು ಚಿನ್ನದ ಪದಕ ಗಳಿಸಿದ್ದಾನೆ.
ಬಿ.ಸಿ. ರೋಡ್ ಕೈಕಂಬ (ಕೆ.ಎಸ್.ಆರ್.ಟಿ.ಸಿ. ಡಿಪೋ ಸಮೀಪದ) ನಿವಾಸಿಗಳಾಗಿರುವ ಮುಹಮ್ಮದ್ ರಫೀಕ್ ಮತ್ತು ಫಾತಿಮಾ ಜೊಹರಾ ದಂಪತಿಯ ಪುತ್ರನಾಗಿರುವ ರೈಫಾನ್ ಅಹಮದ್, ದ.ಕ. ಜಿಲ್ಲಾ ಟ್ವೇಕಾಂಡೋ ಅಸೋಸಿಯೇಶನ್‍ನ ತರಬೇತುದಾರ ಇಸಾಕ್ ನಂದಾವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಈಗಾಗಲೇ ಜಿಲ್ಲಾ ಮಟ್ಟದ ಹಲವು ಟ್ವೇಕಾಂಡೋ ಸ್ಪರ್ಧೆಗಳಲ್ಲಿ ರೈಫಾನ್ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾನೆ.
ರಾಷ್ಟ್ರೀಯ ದಕ್ಷಿಣ ವಲಯ ಟ್ವೇಕಾಂಡೋ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 11 ಚಿನ್ನ ಹಾಗೂ 5 ಬೆಳ್ಳಿ ಪದಕಗಳು ಲಭಿಸಿವೆ.