ತಾಪಂನ ಹಳೇ ಕಟ್ಟಡ ತೆರವುಗೊಳಿಸಿ ಪಿಪಿಪಿ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಶನಿವಾರ ನಡೆದ ತಾಲೂಕು ಪಂಚಾಯತ್ ವಿಶೇಷ ಸಭೆ ನಿರ್ಧರಿಸಿದೆ. ಆದರೆ ಅನಿವಾರ್ಯವಾದರೆ ಮಾತ್ರ ತಾಪಂ ವಾಣಿಜ್ಯ ಸಂಕೀರ್ಣ ತೆರವುಗೊಳಿಸುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭಾಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ. ಈ ಕಟ್ಟಡಕ್ಕೆ ಇದ್ದ ತಾತ್ಕಾಲಿಕ ತಡೆಯಾಜ್ಞೆ ಸರಕಾರಿ ಮಟ್ಟದಲ್ಲಿ ತೆರವುಗೊಂಡಿದೆ ಎಂದು ಸಭೆಯ ಗಮನಕ್ಕೆ ತಂದರು.
ಆಗ ಪ್ರತಿಕ್ರಿಯಿಸಿದ ವಿಪಕ್ಷ ಸದಸ್ಯ ರಮೇಶ್ ಕುಡ್ಮೇರು ಅವರು ಅಲ್ಲಿ ಬಸ್ ನಿಲ್ದಾಣ ಅಥವಾ ಇನ್ನಾವುದೇ ಅಭಿವೃದ್ದಿ ಕಾರ್ಯ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಈ ಹಿಂದಿನ ಸಭೆಯಲ್ಲೆ ಈ ಬಗ್ಗೆ ಎಲ್ಲಾ ಸದಸ್ಯರಿಗೆ ನೀಲನಕ್ಷೆ ಒದಗಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅದು ಈ ವರೆಗೂ ಸಿಕ್ಕಿಲ್ಲ, ತಾಪಂ ಗೆ ಸಂಪನ್ಮೂಲ ಬರುವಂತ ಹೊಸ ಕಟ್ಟಡವನ್ನು ಉಳಿಸಿ ಹಳೇ ಕಟ್ಟಡ ತೆರವುಗೊಳಿಸಬೇಕೆ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಯಶವಂತ ಪೊಳಲಿ, ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆಯಷ್ಟೆ ತೆರವಾಗಿದೆ. ಇನ್ನು ಅಂತಿಮವಾಗಿಲ್ಲ, ಕಟ್ಟಡ ತೆರವುಗೊಳಿಸಿದರೂ, ಸ್ಥಳ ರಸ್ತೆ ಮಾರ್ಜಿನ್ ಗೆ ಹೋಗುವ ಸಾಧ್ಯತೆ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು, ಮಾ.31ರವರೆಗೆ ಹೊಸ ಕಟ್ಟಡದಲ್ಲಿರುವ ಬಾಡಿಗೆದಾರರಿಗೆ ಅವಕಾಶವಿದ್ದು, ಈಗಾಗಲೇ ಅವರೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. ಅದುವರೆಗೆ ಹೊಸ ಕಟ್ಟಡ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ , ಅಗತ್ಯವಿದ್ದರೆ ಮಾತ್ರ ಆ ಕಟ್ಟಡ ತೆರವುಗೊಳಿಸಲಾಗುವುದು ಎಂದರು.
ಸದಸ್ಯ ಸಂಜೀವ ಪೂಜಾರಿ ಮದ್ಯಪ್ರವೇಶಿಸಿ ಒಮ್ಮೆ ಆಗಿರುವ ನಿರ್ಣಯವನ್ನು ಪದೇ ಪದೇ ಬದಲಾಯಿಸುವುದು ಸರಿಯಲ್ಲ ಎಂದರು. ಕಂದಾಯ ಇಲಾಖೆಯ ಸಹಕಾರದಿಂದ ಈ ಜಮೀನು ಲಭ್ಯವಾಗಿದ್ದು, ಸಿಕ್ಕಿರುವ ಅವಕಾಶವನ್ನು ಅಭಿವೃದ್ದಿಯ ದೃಷ್ಟಿಯಿಂದ ಸದುಪಯೋಗಪಡಿಸಿಕೊಳ್ಳುವ ಎಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.
ತಾಪಂ ಹಳೇಕಟ್ಟಡವನ್ನು ಕೆಡವಿ ಅದರ ಪಕ್ಕಾಸು ಸಹಿತ ವಿವಿಧ ಸೊತ್ತುಗಳನ್ನು ಬಹಿರಂಗ ಹರಾಜು ಹಾಕಿ ವಿಲೇ ಮಾಡಲು ಹಾಗೂ ಪಕ್ಕದ ಹಳೆಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
2017-18 ನೇ ಸಾಲಿಗೆ ತಯಾರಿಸಲಾದ ಕ್ರಿಯಾಯೋಜನೆಯ ಕಾಮಗಾರಿಯನ್ನು ಫೆಬ್ರವರಿ 15 ರೊಳಗೆಪೂರ್ಣಗೊಳಿಸುವಂತೆ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸದಸ್ಯರಿಗೆ ಮನವಿ ಮಾಡಿದರು. ಜನಪ್ರತಿನಿಧಿಗಳು ವಿನಿವಿಧಾನಸೌಧದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ತಹಶೀಲ್ದಾರ್‌ಪುರಂದರ ಹೆಗ್ಡೆ ಸ್ಪಷ್ಟಪಡಿಸಿದರು. ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಉಪಸ್ಥಿತರಿದ್ದರು.