ತುಳು ಭಾಷೆ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ನಮ್ಮಲ್ಲಿ ತುಳುವಿನ ಕುರಿತು ಪ್ರೀತಿ ಇದ್ದರೆ ಖಂಡಿತ ಇದು ಸಾಧ್ಯವಾಗುತ್ತದೆ.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಗುರುವಾರ ನಡೆದ ತುಳು ಭಾಷೆ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆ ಕುರಿತು ವಿಶೇಷ ಉಪನ್ಯಾಸದಲ್ಲಿ ಕೇಳಿಬಂದ ಅಭಿಪ್ರಾಯವಿದು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಒಂದು ನಾಶವಾದರೆ ಮತ್ತೊಂದು ನಾಶವಾಗುವ ಅಪಾಯವಿದೆ. ಇದನ್ನು ಎಚ್ಚರದಿಂದ ಗಮನಿಸಬೇಕು. ಮನೆಯಲ್ಲಿ ತುಳು ಭಾಷೆ ಮಾತನಾಡಬೇಕು, ಅದರ ಕುರಿತು ಕೀಳರಿಮೆ ಬೇಡ ಎಂದು ಹೇಳಿದರು.
ವಿಷಯ ಮಂಡಿಸಿದ ಗೋವಾ ವಿವಿ ಪ್ರಾಧ್ಯಾಪಕ ಪ್ರೊ. ಶ್ರೀಪಾದ ಭಟ್, ರಾಜಕೀಯ ಇಚ್ಛಾಶಕ್ತಿ ತುಳು ಭಾಷೆಯ ಅಭಿವೃದ್ಧಿ ಕುರಿತು ಬೇಕು ಎಂದರು. ತುಳು ಭಾಷೆ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆ ಎಂದರೆ ಹಕ್ಕಿಗೆ ರೆಕ್ಕೆ ಕೊಟ್ಟಂತೆ. ಕೊಂಕಣಿ, ಮರಾಠಿ ಭಾಷಾ ಶಾಲೆಗಳು ಗೋವಾದಲ್ಲಿವೆ. ನಮ್ಮಲ್ಲಿ ತುಳುವನ್ನು ಭಾಷೆಯಾಗಿ ಸ್ವೀಕರಿಸಬೇಕು. ತುಳು ಮಾಧ್ಯಮ ಶಾಲೆಗಳು ಹುಟ್ಟಬೇಕು ಎಂದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಮನೋಹರ ಪ್ರಸಾದ್ ಭಾಗವಹಿಸುವರು ಎಂದು ಕೇಂದ್ರದ ಸಂಚಾಲಕ ಪ್ರೊ. ತುಕಾರಾಮ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರೊ. ಆಶಾಲತಾ ಸುವರ್ಣ ವಂದಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.