ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ನರಿಕೊಂಬು ಶ್ರೀ ಮಹಾಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆ ವತಿಯಿಂದ ಜ.6ರಂದು ಯಕ್ಷಾರಾಧನೆ ಮತ್ತು 7ರಂದು ಸಂಗೀತಾರಾಧನೆ ಕಾರ್ಯಕ್ರಮಗಳು ನಡೆಯಲಿವೆ.
6ರಂದು ಶನಿವಾರ ನರಿಕೊಂಬು ಅಂತರ ಎಂಬಲ್ಲಿರುವ ಶ್ರೀ ಕೋದಂಡರಾಮ ಭಜನಾ ಮಂದಿರದಲ್ಲಿ ಮಧ್ಯಾಹ್ನ 5.30ರಿಂದ ನಡೆಯುವ ಯಕ್ಷಾರಾಧನೆ, ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ವಹಿಸುವರು. ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ವಕೀಲರಾದ ರವಿವರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಭಾಗವಹಿಸುವರು. ಈ ಸಂದರ್ಭ ಹಿರಿಯ ಯಕ್ಷಗಾನ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಗುವುದು. ಚಿನ್ಮಯ ಭಟ್ ಕಲ್ಲಡ್ಕ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಬಳಿಕ ಯಕ್ಷಗಾನ ಬಯಲಾಟ ಸೀತಾ ಕಲ್ಯಾಣ ನಡೆಯಲಿದೆ.
7ರಂದು ನರಿಕೊಂಬು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯುವ ಸಂಗೀತಾರಾಧನೆಯನ್ನು ಗಾನ ನೃತ್ಯ ಅಕಾಡೆಮಿ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಉದ್ಘಾಟಿಸುವರು. ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರದರ್ಶನವಿರಲಿದೆ. ಬಳಿಕ ಸಂಜೆ 5.30ರಿಂದ ವಿದುಷಿ ರಾಜಶ್ರೀರಾಮ್ ಚೆನ್ನೈ ಅವರ ಕಛೇರಿ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.