ಮಾನವ ಬಂಧುತ್ವ ವೇದಿಕೆ, ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘ ವತಿಯಿಂದ ಬಿ.ಸಿ.ರೋಡ್ ಗೂಡಿನಬಳಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುವೆಂಪು ವಿಶ್ವಮಾನವ ಸಂದೇಶ ಜಾಥಾದ ಸಂದೇಶ ಕಾರ್ಯಕ್ರಮ ನಡೆಯಿತು.
ಡೋಲು ಬಡಿಯುವ ಮೂಲಕ ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಉದ್ಘಾಟಿಸಿದರು. ಅವರು ಮಾತನಾಡಿ ಕುವೆಂಪು ಅವರ ಚಿಂತನೆ, ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಸಮುದಾಯ ಕೋಮುವಾದದ ವಿರುದ್ದ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಕಾರ್ಯಕ್ರಮದ ಪ್ರಸ್ತುತತೆ ಕುರಿತು ಮಾತನಾಡಿದರು. ನಾವು ಬಂಧುತ್ವದ ತಳಹದಿಯಲ್ಲಿ ಕೆಲಸ ಮಾಡುತ್ತೇವೆ. ಶಿಕ್ಷಕರ ದಿನಾಚರಣೆ ಮಾಡುತ್ತೇವೆ. ಆದರೆ ಫಾತಿಮಾ ಶೇಖ್ ಮತ್ತು ಸಾವಿತ್ರಿ ಬಾಯಿ ಕುರಿತು ಮಾತನಾಡುವುದು ಕಡಿಮೆ. ನಾರಾಯಣ ಗುರು, ಬಸವಣ್ಣ, ಅಂಬೇಡ್ಕರ್ ಸಂದೇಶಗಳ ಕುರಿತು ಮಾಹಿತಿ ನೀಡುವ ಕಾರ್ಯ ನೀಡಲಾಗುತ್ತಿದೆ. ಕುವೆಂಪು ಅವರು ರಾಮಾಯಣ ಕುರಿತು ವ್ಯಾಖ್ಯೆ ನೀಡಿದ್ದಾರೆ. ಅವರ ವಿಶ್ವಮಾನವ ಸಂದೇಶವನ್ನು ನಾವು ಇಂದು ಎಲ್ಲೆಡೆ ಪಸರಿಸುತ್ತಿದ್ದೇವೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಸದಸ್ಯ ಲೋಕೇಶ ಸುವರ್ಣ ಮತ್ತಿತರರು ಹಾಜರಿದ್ದರು. ವೇದಿಕೆಯ ತಾಲೂಕು ಸಂಚಾಲಕ ಎ.ಗೋಪಾಲ ಅಂಚನ್ ವಿವರ ನೀಡಿದರು. ಕಾಲೇಜು ಪ್ರಾಂಶುಪಾಲ ಯೂಸುಫ್ ಸ್ವಾಗತಿಸಿದರು. ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ದಾಮೋದರ ವಂದಿಸಿದರು.